ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಬಳಿಯ ಬನ್ನೇರುಘಟ್ಟದ ಸುದರ್ಶನ್ ಲೇಔಟ್ ನ ಮನೆಯೊಂದರಲ್ಲಿನ ಸಿಲಿಂಡರ್ ಸ್ಫೋಟಗೊಂಡು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜೇಂದ್ರ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಪೋಟ ಸಂಭವಿಸಿದ ಮನೆಯಲ್ಲಿ ರಾಜೇಂದ್ರ ಹಾಗೂ ಮಗಳು ಇದ್ದರು. ರಾಜೇಂದ್ರ ಎಂದಿನಂತೆ ಇಂದು (ನ.03) ಬೆಳಿಗ್ಗೆ 5 ಗಂಟೆಗೆ ಸಿಲಿಂಡರ್ ಆನ್ ಮಾಡಲು ಹೋಗಿದ್ದರು. ಈ ವೇಳೆ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ 3-4 ಮನೆಗಳಿಗೂ ಹಾನಿಯಾಗಿದೆ. ಅಕ್ಕಪಕ್ಕದ ಮನೆಯ ಬಾಗಿಲು ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಹಾಗೂ ಮನೆಯಲ್ಲಿದ್ದ ವಸ್ತುಗಳೆಲ್ಲ ಛಿದ್ರ ಛಿದ್ರ ಆಗಿವೆ. ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ತಾರಸಿ ಸಿಮೆಂಟ್ ತಗಡಿನ ಶೀಟುಗಳು ಧ್ವಂಸವಾಗಿವೆ. ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಹಾಗೂ ಬೈಕ್ ಗಳಿಗೂ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿ, ಬನ್ನೇರುಘಟ್ಟ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
ರಾಜೇಂದ್ರ ಕುಟುಂಬ ಆರು ತಿಂಗಳ ಹಿಂದೆ ಬಾಡಿಗೆಗೆ ಬಂದಿದೆ. ರಾಜೇಂದ್ರ ಬನ್ನೇರುಘಟ್ಟ ಪಾರ್ಕ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದಾರೆ. ಮಗಳು, ಅಳಿಯ ರಾಜೇಂದ್ರ ಜೊತೆ ವಾಸವಾಗಿದ್ದಾರೆ. ಘಟನೆ ನಡೆದಾಗ ತಂದೆ ಮಗಳು ಮಾತ್ರ ಇದ್ದರು ಎಂದು ಮನೆ ಮಾಲೀಕ ಶಿವಕುಮಾರ್ ತಿಳಿಸಿದ್ದಾರೆ.















