ಮನೆ ರಾಜ್ಯ ಸ್ವಂತ ಜಮೀನನ್ನೇ ಬಡವರಿಗೆ ಬಿಟ್ಟು ಕೊಟ್ಟ ಮಹಾನ್ ವ್ಯಕ್ತಿ ಡಿ.ದೇವರಾಜ ಅರಸ್: ಎಸ್.ಟಿ ಸೋಮಶೇಖರ್

ಸ್ವಂತ ಜಮೀನನ್ನೇ ಬಡವರಿಗೆ ಬಿಟ್ಟು ಕೊಟ್ಟ ಮಹಾನ್ ವ್ಯಕ್ತಿ ಡಿ.ದೇವರಾಜ ಅರಸ್: ಎಸ್.ಟಿ ಸೋಮಶೇಖರ್

0

ಮೈಸೂರು:  ದೇಶದಲ್ಲಿ ಇದ್ದಂತಹ ಭೂರಹಿತ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ತನ್ನ ಸ್ವಂತ ಜಮೀನನ್ನೇ ರೈತರಿಗೆ ಬಿಟ್ಟುಕೊಟ್ಟಂತಹ ಮಹಾನ್ ವ್ಯಕ್ತಿ ಡಿ.ದೇವರಾಜ ಅರಸುರವರು ಎಂದು ಸಹಕಾರ ಸಹಕಾರ ಹಾಗೂ ಮೈಸೂರು ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್  ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಶೋಷಿತರ ಅಭಿವೃದ್ಧಿ ಹರಿಕಾರ, ನೊಂದವರ ನಂದಾದೀಪ, ಧೀಮಂತ ನಾಯಕ ಡಿ. ದೇವರಾಜ್ ಅರಸು ರವರ 107ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 ದೇವರಾಜ್ ಅರಸ್ ಅವರ 107ನೇ ಜನ್ಮದಿನಾಚರಣೆಯ ಆಚರಿಸುವ ಭಾಗ್ಯ ನನಗೂ ಕೂಡ ಬಂದಿದೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ 8 ವರ್ಷಗಳ ಕಾಲ ಇದ್ದವರು ದೇವರಾಜ್ ಅರಸುರವರು ಎಂದು ಹೇಳಿದರು.
ಜನರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಉಳುವವನೇ ಭೂಮಿಯ ಒಡೆಯ, ಭೂಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೆ ತಂದು ಲಕ್ಷಾಂತರ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಕಾರ್ಯಕ್ರಮಗಳ ಆಯೋಜನೆ ಮಾಡಿ, ಆಯನೂರು ಆಯೋಗ ರಚನೆ ಮಾಡಿ ಉಳಿದ ವರ್ಗದವರಿಗೂ ಮಿಸಲಾತಿ ಕೊಡಬೇಕು ಎಂದು ಯೋಜನೆ ಮಾಡಿದವರು ಇವರು ಎಂದು ತಿಳಿಸಿದರು.
 ದೇವರಾಜ್ ಅರಸ್ ಅವರ ಪ್ರತಿಮೆಯನ್ನು ಹೊಸ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು. ಇಂದು ದೇವರಾಜ್ ಅರಸ್ ಅವರ ಅಭಿಮಾನಿ ಹಾಗೂ ಪಟ್ಟ ಶಿಷ್ಯರಾದ ಹೆಚ್. ವಿಶ್ವನಾಥ್ ಅವರಿಗೆ ಜಿಲ್ಲಾಮಟ್ಟದ ಡಿ.ದೇವರಾಜ ಅರಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಹೇಳಿದರು.
ವಿಧಾನ ಪರಿಷತ್ ಶಾಸಕರಾದ ಹೆಚ್. ವಿಶ್ವನಾಥ್ ಮಾತನಾಡಿ,  ನನಗೆ ದೇವರಾಜ ಅರಸ್ ಅವರ ಹೆಸರಲ್ಲಿ ಯಾವುದೇ ಪ್ರಶಸ್ತಿ ಸಿಕ್ಕರೂ ಕೂಡ ವಿಶ್ವಸಂಸ್ಥೆಯಲ್ಲಿ ಸಿಕ್ಕ ಪ್ರಶಸ್ತಿ ಎಂದು ಭಾವಿಸುವೆ. ನನ್ನನ್ನು ಆಳವಾಗಿ ಅಭಿಮಾನಿಸಿದವರು, ಪ್ರಭಾವಿಸಿದವರು ಇವರು. ನನ್ನ ಅನುಭವದಲ್ಲಿನ ಮೇರುವ್ಯಕ್ತಿ, ಎಲ್ಲರನ್ನೂ ಪ್ರೀತಿಸುವಂತಹ ವ್ಯಕ್ತಿತ್ವ ದೇವರಾಜ್ ಅರಸ್ ಅವರದು ಎಂದು ತಿಳಿಸಿದರು.
 ದೇವರಾಜ ಅರಸ್ ಅವರು ಜಾತಿ ರಾಜಕಾರಣ ಹೋಗಲಾಡಿಸುವುದಕ್ಕೆ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಮಾಡಿದರು. ಆ ಕಾರ್ಯಕ್ರಮಗಳನ್ನು 6 ವರ್ಷಗಳ ಕಾಲ ಜನರಿಗೆ ತಿಳಿಸುವ ಕೆಲಸ ನಮ್ಮದಾಗಿತ್ತು. ಎಲ್ಲ ಜಾತಿ, ಜನಾಂಗ, ಧರ್ಮ, ಭಾಷಿಕರು ಸೇರಿದ ಸೌಧವೇ ವಿಧಾನಸೌಧ ಎಂದು ಹೇಳಿದವರು ಇವರು. ದೇವರಾಜ ಅರಸ್‌ರವರು ಯಾವುದೇ ರಾಜಕಾರಣಿಗಳಿಗೆ ಸರಿಸಾಟಿಯಾಗಿ ನಿಲ್ಲುವಂತಹ ವ್ಯಕ್ತಿತ್ವ ಅವರಿಗಿತ್ತು ಎಂದು ಹೇಳಿದರು.
 ಭೂಸುಧಾರಣಾ ಕಾನೂನು ಕಾರ್ಯಕ್ರಮದಲ್ಲಿ 22 ಲಕ್ಷ ಎಕರೆ ಭೂಮಿಯನ್ನು ಭೂರಹಿತರಿಗೆ ಹಂಚಿದ್ದರು. ಮಕ್ಕಳು ಓದಬೇಕು ಮುಂದೆ ಬರಬೇಕು ಎನ್ನುವ ದೃಷ್ಟಿಯಿಂದ ದೇವರಾಜ ಅರಸು ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಿಸಿದರು. ನಾನು ಪಕ್ಷಗಳನ್ನು ಬದಲಾಯಿಸಿರಬಹುದು. ಆದರೆ ಬಡವರ ಪರವಾದ ಮನಸ್ಸು, ಕಾರ್ಯಕ್ರಮಗಳನ್ನು ದೇವರಾಜ ಅರಸುರವರು ನನ್ನ ಹೃದಯದಲ್ಲಿ ನೆಟ್ಟಂತಹ ಅಜೆಂಡಾ ಯಾವತ್ತೂ ಬದಲಾಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಎಲ್ ನಾಗೇಂದ್ರ, ಶಾಸಕರಾದ ಡಾ.ಎಸ್ ಯತೀಂದ್ರ, ಜಿ.ಟಿ ದೇವೇಗೌಡ, ಮಹಾಪೌರರಾದ ಸುನಂದಾ ಪಾಲನೇತ್ರ, , ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷರಾದ ರಘು ಕೌಟಿಲ್ಯ, ವಿಧಾನ ಪರಿಷತ್ ಶಾಸಕರಾದ ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿಗಳಾದ ಬಗಾದಿ ಗೌತಮ್, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ಬಿ.ಆರ್. ಪೂರ್ಣಿಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.