ಮೈಸೂರು: ಡಿ ರೂಪ ಅವರು ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ. ಇದಕ್ಕೆ ಸಂಬಂಧಪಟ್ಟವರು ಉತ್ತರ ಕೊಡಬೇಕು ಎಂದು ಐಪಿಎಸ್ ಅಧಿಕಾರಿ ರೂಪ ಪರ ಸಂಸದ ಪ್ರತಾಪ್ ಸಿಂಹ ಬ್ಯಾಟ್ ಬೀಸಿದ್ದಾರೆ.
ಐಪಿಎಸ್, ಐಎಎಸ್ ಅಧಿಕಾರಿ ರೂಪ ಮತ್ತು ರೋಹಿಣಿ ಸಿಂಧೂರಿ ನಡುವೆ ವಾಕ್ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿದ ಅವರು, ಡಿ ರೂಪ ಅವರ ಪ್ರಶ್ನೆಗೆ ಸಂಬಂಧಿಸಿದವರು ಉತ್ತರ ನೀಡಬೇಕೆಂದರು.
ಸಿದ್ದರಾಮಯ್ಯನವರು ಸಿಎಂ ಆಗಿದ್ದ ವೇಳೆ ರಾಜು ಕೊಲೆ ಆಯಿತು. ಆ ವೇಳೆ ಅಬಿದ್ ಪಾಷಾ ಮೇಲೆ ಚಾರ್ಜ್ ಶೀಟ್ ಮಾಡಿಲ್ಲ. 90 ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಸಬೇಕಿತ್ತು. ಆದರೆ ಬೇಕಂತಲೇ ಚಾರ್ಜ್ ಶೀಟ್ ಸಲ್ಲಿಸಲಿಲ್ಲ.ಇದರಿಂದ ಕೊಲೆ ಆರೋಪಿಗಳು ಸುಲಭವಾಗಿ ಹೊರಗೆ ಬರುವಂತಾಯ್ತು. ಇದಕ್ಕೆ ಕಾರಣ ಅಂದಿನ ಸಿದ್ದರಾಮಯ್ಯನವರ ಸರ್ಕಾರ ಎಂದು ಹರಿಹಾಯ್ದರು.
ನಮ್ಮ ಸರ್ಕಾರ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ಬ್ಯಾನ್ ಮಾಡಿದೆ. ಇದು ಯಡಿಯೂರಪ್ಪನವರು ಹಾಗೂ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ಮಂಡ್ಯದ ಹನಕೆರೆ ಬಳಿ ಅಂಡರ್ ಪಾಸ್’ಗೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯ ರೈತ ಸಂಘ, ನಮ್ಮ ಪಕ್ಷದವರು ಸಹ ಅಂಡರಪಾಸ್ ಬೇಕು ಎಂದು ಕೇಳಿದ್ದರು. ಆ ರಸ್ತೆ ಪ್ಲಾಟ್ ಇರೋ ಕಾರಣ 200 ಮೀಟರ್ ದೂರದಲ್ಲಿ ಇದೆ.ಈಗಾಗಲೇ ನ್ಯಾಷನಲ್ ಹೈವೆ ಅವರ ಬಳಿ ಮಾಹಿತಿ ಕೇಳಲಾಗಿದೆ. ಇದಕ್ಕಾಗಿ ಬೇರೆ ದಾರಿ ಹುಡುಕಿದ್ದೇವೆ. ರಸ್ತೆ ಪೂರ್ಣವಾದ ಬಳಿಕವೇ ಸಣ್ಣಪುಟ್ಟ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಮಾಹಿತಿ ನೀಡಿದರು.
ಮೈಸೂರಿನಲ್ಲಿ ಫಿಲ್ಮಿ ಸಿಟಿ ಆಗುತ್ತದೆ. ಇದಕ್ಕೆ ಸಿಎಂ ಬಸವರಾಜ ಬೋಮ್ಮಾಯಿಯವರ ಸಹಕಾರವಿದೆ. ಇದರ ಬಗ್ಗೆ ಅವರಿಗೂ ಆಸಕ್ತಿ ಇದೆ. ಅತಿ ಕಡಿಮೆ ಅವಧಿಯಲ್ಲಿ ಮೈಸೂರಿಗೆ ಹೆಚ್ಚು ಬಾರಿ ಬಂದಿದ್ದಾರೆ. ಮೈಸೂರಿನ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದಾರೆ ಸಿಎಂ ಅವರಿಗೆ ಮೈಸೂರಿನ ಜನತೆಯ ಬಗ್ಗೆ ಧನ್ಯವಾದ ಹೇಳುತ್ತೇನೆ ಎಂದರು.