ಕೋಟಿಗೊಬ್ಬ 2 ಮತ್ತು ನಟಸಾರ್ವಭೌಮ ಸೇರಿದಂತೆ ಹಲವಾರು ಬಹುಭಾಷಾ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಡಿ ಇಮಾನ್, ಹೊಸ ಯೋಜನೆಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಗೀತರಚನೆಕಾರ ಮತ್ತು ಕಥೆಗಾರ ಪುನೀತ್ ರಂಗಸ್ವಾಮಿ ಅವರು ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಏಕ್ ಲವ್ ಯಾ ಖ್ಯಾತಿಯ ರಾಣಾ ನಾಯಕನಾಗಿ ನಟಿಸುತ್ತಿದ್ದಾರೆ.
ಚೌಕ ಮತ್ತು ಕಾಟೇರ ಚಿತ್ರಗಳ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ತಮ್ಮ Tharun Sudhir Kreatiivez ಅಡಿಯಲ್ಲಿ ಎರಡನೇ ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಚಿತ್ರಕ್ಕೆ ಸಹ-ನಿರ್ಮಾಪಕರಾಗಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ ಮತ್ತು ಭಾವನಾತ್ಮಕವಾದ ಕಥೆಯನ್ನು ಒಳಗೊಂಡಿದೆ.
ಚಿತ್ರತಂಡ ಈಗಾಗಲೇ ಅರ್ಧದಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಈ ಚಿತ್ರದ ಮೂಲಕ ‘ಮಹಾನಟಿ’ ಪ್ರಶಸ್ತಿ ವಿಜೇತೆಯಾದ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರ ತನ್ನ ಮೋಷನ್ ಪೋಸ್ಟರ್‌ನೊಂದಿಗೆ ಗಮನ ಸೆಳೆದಿದೆ. ರಾಣಾ ಅವರ ಪಾಸ್‌ಪೋರ್ಟ್ ಗಾತ್ರದ ಫೋಟೊ ಹೊಂದಿರುವ ಡ್ರೈವಿಂಗ್ ಲೈಸೆನ್ಸ್ ವಿನ್ಯಾಸದ ವಿಶಿಷ್ಟ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ.
ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ತರುಣ್ ಸುಧೀರ್, ಕಥೆಯು ಹಸಿರಾದ ಭಾವನೆಗಳು, ಚಿಂತನೆ-ಪ್ರಚೋದಕ ಕ್ಷಣಗಳು ಮತ್ತು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಘಟನೆಯ ನೈಜ ಚಿತ್ರಣ ಮತ್ತು ಕಥೆಯನ್ನು ಒಳಗೊಂಡಿದೆ ಎನ್ನುತ್ತಾರೆ.ಚಿತ್ರವನ್ನು ನರಸಿಂಹ ನಾಯಕ್ (ರಾಜು ಗೌಡ) ಪ್ರಸ್ತುತಪಡಿಸಿದ್ದಾರೆ. ಚಿತ್ರಕ್ಕೆ ಛಾಯಾಗ್ರಾಹಕರಾಗಿ ಸುಧಾಕರ್ ಎಸ್ ರಾಜ್, ಕೆಎಂ ಪ್ರಕಾಶ್ ಅವರ ಸಂಕಲನ ಮತ್ತು ಕಲಾ ನಿರ್ದೇಶಕರಾಗಿ ರಾಜಶೇಖರ್ ಇದ್ದಾರೆ.