ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಡಿ.ತ್ರಿವೇಣಿ ಆಯ್ಕೆಯಾಗಿದ್ದು, ಉಪ ಮೇಯರ್ ಆಗಿ ಬಿ.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
23 ವರ್ಷದ ತ್ರಿವೇಣಿ ರಾಜ್ಯದ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆಗೆ ಇಂದು ಚುನಾವಣೆ ನಡೆಯಿತು. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ, ಉಪ ಮೇಯರ್ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಿತ್ತು. ಇನ್ನು ಪಾಲಿಕೆಯಲ್ಲಿ 39 ಸದಸ್ಯರಿದ್ದು, ಸಂಸದರು, ಶಾಸಕರ ಮತಗಳಿಂದ ಬಿಜೆಪಿ 16 ಮತಗಳನ್ನು ಹೊಂದಿದ್ದರೆ ಕಾಂಗ್ರೆಸ್ 28 ಮತಗಳನ್ನು ಹೊಂದಿತ್ತು.
ಮೇಯರ್ ಸ್ಥಾನಕ್ಕೆ ಕಾಂಗ್ರೆದ್ ನಿಂದ 35ನೇ ವಾರ್ಡಿನ ಸದಸ್ಯ ವಿ.ಕುಬೇರ, 7ನೇ ವಾರ್ಡಿನ ಉಮದೇವಿ ಶಿವರಾಜ್ ಮತ್ತು ಡಿ.ತ್ರಿವೇಣಿ ಅವರು, ಬಿಜೆಪಿಯಿಂದ 16ನೇ ವಾರ್ಡಿನ ನಾಗರತ್ನ ಅವರು ನಾಮಪತ್ರ ಸಲ್ಲಿಸಿದ್ದರು. ಈ ಮಧ್ಯೆ ಕಾಂಗ್ರೆಸ್ ಪಕ್ಷದ ಕುಬೇರ ಮತ್ತು ಉಮಾದೇವಿ ನಾಮ ಪತ್ರ ಪಡೆದಿದ್ದು ಡಿ.ತ್ರಿವೇಣಿ ಮತ್ತು ನಾಗರತ್ನ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಹಾಜರಿದ್ದ 44 ಸದಸ್ಯರ ಪೈಕಿ ತ್ರಿವೇಣಿ 28 ಮತಗಳನ್ನು ಪಡೆದರೆ ನಾಗರತ್ನ ಅವರು 16 ಮತಗಳನ್ನು ಪಡೆದಿದ್ದರು.
ಮೇಯರ್ ಆಗಿ ತ್ರಿವೇಣಿ ಆಯ್ಕೆಯನ್ನು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಘೋಷಣೆ ಮಾಡಿದರು. ಪಾಲಿಕೆ ಆಯುಕ್ತ ರುದ್ರೇಶ್, ಎಡಿಸಿ ಉಪಸ್ಥಿತರಿದ್ದರು.