ವಿಜಯಪುರ : ರಾಜ್ಯದ ಹಾಲಿ ಸಂಸದರಲ್ಲಿ ಡಿ.ವಿ. ಸದಾನಂದಗೌಡ, ಶಿವಕುಮಾರ ಉದಾಸಿ, ಜಿ.ಎಂ.ಸಿದ್ದೇಶ್ವರ ಸೇರಿದಂತೆ ಸುಮಾರು ಎಂಟು ಲೋಕಸಭೆ ಸದಸ್ಯರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಹಂಚಿಕೆಯಲ್ಲಿ ರಾಜ್ಯದ ಎಂಟು ಕ್ಷೇತ್ರಗಳಲ್ಲಿ ಬದಲಾವಣೆ ನನಗಿರುವ ಮಾತಿಯ ಪ್ರಕಾರ ಬಿಜೆಪಿ ಎಂಟು ಹಾಲಿ ಸಂಸದರು ಸ್ವಯಂ ಪ್ರೇರಿತರಾಗಿ ಚುನಾವಣೆಗೆ ಸ್ಪರ್ಧಿಸದೇ ಹಿಂದೆ ಸರಿಯಲಿದ್ದಾರೆ. ಬೆಂಗಳೂರು ಉತ್ತರ ಸಂಸದ, ಮಾಜಿ ಸಿಎಂ ಸದಾನಂದ ಗೌಡ, ದಾವಣಗೆರೆ ಸಿದ್ದೇಶ್ವರ, ಹಾವೇರಿಯ ಶಿವಕುಮಾರ ಉದಾಸಿ ಸೇರಿದಂತೆ ಇತರರು ಹೊಸಬರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸ್ವಯಂ ಪ್ರೇರಣೆಯಿಂದ ಸ್ಪರ್ಧೆಗೆ ಇಳಿಯುತ್ತಿಲ್ಲ ಎಂದರು.
ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಾಲಿ ಸಂಸದರು ನನಗೆ ಟಿಕೆಟ್ ಸಿಗುತ್ತದೆ ಎಂದು ಹೇಳುವುದು ಸ್ವಾಭಾವಿಕ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನನಗೂ ಟಿಕೆಟ್ ಇಲ್ಲ ಎಂದು ಸುದ್ದಿ ಹರಡಲಾಗಿತ್ತು. ಆದರೆ ನನಗೆ ಟಿಕೆಟ್ ಸಿಗುತ್ತದೆ ಎಂದು ನಾನು ಹೇಳುತ್ತಿದ್ದೆ. ಅದೇ ರೀತಿ ಹಾಲಿ ಸಂಸದರೂ ತಮಗೆ ಟಿಕೆಟ್ ಸಿಗುತ್ತದೆ ಎಂದು ಹೇಳಿಕೊಳ್ಳುವಲ್ಲಿ ತಪ್ಪಿಲ್ಲ.ಹಾಲಿ ಸಂಸದರು ಭಾರಿ ಶಕ್ತಿವಂತರು, ಹಿರಿಯರಿದ್ದಾರೆ. ಬಿಜೆಪಿ ಚುನಾವಣೆ ಸ್ಪರ್ಧಾ ನಿಯಮಗಳಂತೆ 75 ವರ್ಷ ವಯೋಮಿತಿಯಲ್ಲೇ ಇದ್ದಾರೆ ಎಂದರು.
ವಿಜಯಪುರ ಕ್ಷೇತ್ರದಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.