ಮನೆ ಮನರಂಜನೆ “ಅಪ್ಪಾ ಐ ಲವ್‌ ಯು’: ಚಿತ್ರ ವಿಮರ್ಶೆ

“ಅಪ್ಪಾ ಐ ಲವ್‌ ಯು’: ಚಿತ್ರ ವಿಮರ್ಶೆ

0

ಕಷ್ಟಪಟ್ಟು ಸಾಕಿ ಬೆಳೆಸಿದ ಮಕ್ಕಳು, ದೊಡ್ಡವರಾದ ಮೇಲೆ ಪೋಷಕರನ್ನು ಕಡೆಗಣಿಸಿದರೆ ಅವರ ಪರಿಸ್ಥಿತಿ ಏನಾಗುತ್ತದೆ, ಇದಕ್ಕೆ ಪಾಲಕರು ಏನು ಮಾಡ ಬಹುದು, ಇಂತಹ “ಭಾವನಾತ್ಮಕ’ ಸಂಕಷ್ಟಕ್ಕೆ ಪರಿಹಾರ ಎಂಬುದೇ ಇಲ್ಲವೇ… ಇಂತಹ ಒಂದು ಗಂಭೀರ ವಿಚಾರವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ಅಪ್ಪಾ ಐ ಲವ್‌ ಯು’. ಹೆಸರಿಗೆ ತಕ್ಕಂತೆ ಇದು ತಂದೆ-ಮಗನ ನಡುವೆ ನಡೆಯುವ ಕಥೆ.

Join Our Whatsapp Group

ನಿರ್ದೇಶಕ ಅಥರ್ವ್‌ ಆರ್ಯ ಇವತ್ತಿನ ಸಮಾಜದಲ್ಲಿ ಹಲವು ತಂದೆ-ತಾಯಂದಿರು ಅನುಭವಿಸುತ್ತಿರುವ ಸಂಕಟದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೇ ಕಾರಣದಿಂದ ಸಿನಿಮಾ ಹೆಚ್ಚು ಆಪ್ತವಾಗುತ್ತಾ, ಭಾವನಾತ್ಮಕವಾಗಿ ಕಾಡುತ್ತಾ ಸಾಗುತ್ತದೆ.  ಮುಖ್ಯವಾಗಿ ನಿರ್ದೇಶಕರು ಸಿನಿಮಾ ಆರಂಭದಿಂದಲೇ ಕಥೆಗೆ ಹೆಚ್ಚು ಮಹತ್ವ ಕೊಟ್ಟು ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಹಾಗಾಗಿ, ಚಿತ್ರ ಒಂದಷ್ಟು ಕುತೂಹಲ ಹಾಗೂ ಟ್ವಿಸ್ಟ್‌ಗಳೊಂದಿಗೆ ಸಾಗುತ್ತದೆ.

ಮೊದಲೇ ಹೇಳಿದಂತೆ ಇಲ್ಲಿ ಕಥೆಗೆ ಹೆಚ್ಚು ಮಹತ್ವ ಕೊಟ್ಟಿದ್ದು, ಹೀರೋ, ಹೀರೋಯಿನ್‌, ಆ್ಯಕ್ಷನ್‌, ಕಾಮಿಡಿ.. ಇಂತಹ ಸಿದ್ಧಸೂತ್ರಗಳಿಂದ ಮುಕ್ತವಾಗಿ ಕಂಟೆಂಟ್‌ಗೆ ಹೆಚ್ಚು ಗಮನ ಕೊಡಲಾಗಿದೆ. ಒಬ್ಬ ತಂದೆ, ತನ್ನ ಮಗನಿಗಾಗಿ ಹೇಗೆಲ್ಲಾ ಕಷ್ಟಪಡುತ್ತಾನೆ, ಕೊನೆಗೆ ಆ ಪುತ್ರನ ವರ್ತನೆ ಹೇಗಿರುತ್ತದೆ, ಅದರಿಂದ ಒಂದು ಸಂಸಾರದಲ್ಲಿ ಹೇಗೆ ಬಿರುಗಾಳಿ ಬೀಸುತ್ತದೆ ಎಂಬುದು ಸಿನಿಮಾದ ಕಥಾಹಂದರ.

ತಾನು ಏನು ಹೇಳಬೇಕೆಂಬ ಸ್ಪಷ್ಟತೆ ನಿರ್ದೇಶಕರಿಗೆ ಇದ್ದ ಕಾರಣ ಸಿನಿಮಾ ಯಾವುದೇ ಗೊಂದಲವಿಲ್ಲದೇ ಮೂಡಿಬಂದಿದೆ. ಚಿತ್ರದಲ್ಲಿ ಒಂದಷ್ಟು ಯೋಚಿಸುವ ವಿಚಾರಗಳಿರುವುದು ಈ ಸಿನಿಮಾದ ಪ್ಲಸ್‌. ಇಡೀ ಸಿನಿಮಾದ ಕಥೆ ಸಾಗುವುದು ತಬಲ ನಾಣಿ ಅವರ ಸುತ್ತ. ಮಗನಿಗಾಗಿಯೇ ತನ್ನ ಜೀವನ ಮುಡಿಪಾಗಿಟ್ಟ ತಂದೆಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಂದ ಕಾಮಿಡಿ ಬಯಸುವವರಿಗೆ ಅವರು “ಸೆಂಟಿಮೆಂಟ್‌’ ದರ್ಶನ ಮಾಡಿಸಿದ್ದಾರೆ.

ಚಿತ್ರದಲ್ಲಿ ಪ್ರೇಮ್‌ ಹಾಗೂ ಮಾನ್ವಿತಾ ಕೆಲವೇ ಕೆಲವು ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ಉಳಿದಂತೆ ಸಂಜಯ್‌, ಜೀವಿತಾ, ಅರವಿಂದ್‌ ರಾವ್‌, ಬಲರಾಜವಾಡಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.