ಮೈಸೂರು(Mysuru): ದಲಿತರನ್ನು ಮುಖ್ಯಮಂತ್ರಿ ಮಾಡುವುದು, ಕೇವಲ ರಾಜಕಾರಣ ಮಾಡಲು ಮಾತ್ರ ಚರ್ಚೆ ಆಗುತ್ತಿದೆ. ಚುನಾವಣೆ ಸಮೀಪ ಬಂದಾಗ ದಲಿತ ಮುಖ್ಯಮಂತ್ರಿ ಹೆಸರು, ಆಮೇಲೆ ಮರೆಯುತ್ತಾರೆ ಎಂದು ಸಚಿವ ಎ.ನಾರಾಯಣಸ್ವಾಮಿ ಬೇಸರ ಹೊರ ಹಾಕಿದರು.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಕಾಂಗ್ರೆಸ್‌ಗೆ ದಲಿತ ಸಿಎಂ ಮಾಡುವ ಅವಕಾಶ ಇತ್ತು. ಹಿರಿಯ ನಾಯಕರಾದರೂ ಮಲ್ಲಿಕಾರ್ಜುನ್ ಖರ್ಗೆ ಅವರನ್ನೂ ಸಿಎಂ ಮಾಡಲಿಲ್ಲ. ನಂತರ ಡಾ.ಜಿ.ಪರಮೇಶ್ವರ ಸಿಎಂ ಆಗಲು ಅರ್ಹರಾಗಿದ್ದರು. ಆದರೆ, ಪಿತೂರಿ ಮಾಡಿ ಸೋಲಿಸಿದ್ದೂ ಕೂಡ ಕಾಂಗ್ರೆಸ್ನವರೇ ಎಂದರು.
ಜೆಡಿಎಸ್ ಇದೀಗ ದಲಿತ ಮುಖ್ಯಮಂತ್ರಿ ಮಾಡುವುದಾಗಿ ಹೇಳುತ್ತಿದೆ. ಆದರೆ, ದಲಿತ ರಾಜ್ಯಾಧ್ಯಕ್ಷನನ್ನೇ ಕಿತ್ತೊಗೆದಿದ್ದಾರೆ. ಇದು ಕೇವಲ ಚರ್ಚೆಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಇವರಾರಿಗೂ ದಲಿತರನ್ನು ಸಿಎಂ ಮಾಡುವ ಆಸಕ್ತಿ ಇಲ್ಲ ಎಂದರು.
ಇಲ್ಲಿನ ಮೃಗಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಸಚಿವ ನಾರಾಯಣಸ್ವಾಮಿ, ಎಲೆಕ್ಟ್ರಿಕ್ ವಾಹನದಲ್ಲಿ ಸಂಚರಿಸಿ ಪ್ರಾಣಿಗಳ ವೀಕ್ಷಣೆ ಮಾಡಿದರು. ಇದೇ ವೇಳೆ ಚಿತ್ರದುರ್ಗದ ಮೃಗಾಲಯ ಅಭಿವೃದ್ಧಿ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅಲ್ಲಿನ ಮೃಗಾಲಯಕ್ಕೆ ಮೈಸೂರು ಮೃಗಾಲಯದಿಂದ ಜಿರಾಫೆ ತೆಗೆದುಕೊಂಡು ಹೋಗುವ ಚಿಂತನೆ ಇದೆ ಎಂದು ಹೇಳಿದರು.