ಮೈಸೂರು/ಬೆಳಗಾವಿ (Mysuru/Belagavi)- ದಲಿತ ಹೋರಾಟಗಾರ, ಬರಹಗಾರ ರವೀಂದ್ರ ಹಾರೋಹಳ್ಳಿ (Ravindra Harohalli ) ಅವರನ್ನು ಪೊಲೀಸರು ಬಂಧಿಸಿದ್ದಾರೆ.
2017ರ ಡಿಸೆಂಬರ್‌ನಲ್ಲಿ ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ಗೆ ಸಂಬಂಧಿಸಿದಂತೆ ರವೀಂದ್ರ ಹಾರೋಹಳ್ಳಿ ಅವರನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಠಾಣೆಯ ಪೊಲೀಸರು ಮೈಸೂರಿನ ಹಾರೋಹಳ್ಳಿಯಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಚಿಕ್ಕೋಡಿ ತಾಲ್ಲೂಕು ಕರೋಶಿಯ ಚೇತನ ಹೊನ್ನಗೋಳ ಅವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು.
ನ್ಯಾಯಾಲಯದಿಂದ ಹೊರಡಿಸಲಾಗಿರುವ ಜಾಮೀನು ರಹಿತ ವಾರೆಂಟ್ ಅನ್ನು ಆಧರಿಸಿ ಅವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರ ಅವರು 2019ರಿಂದಲೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.
ಪ್ರಕರಣ ದಾಖಲಾದಾಗಿನಿಂದ ರವೀಂದ್ರ ಅವರು ತಲೆಮರೆಸಿಕೊಂಡಿದ್ದರು. ನಾಲ್ಕೈದು ಬಾರಿ ಚಿಕ್ಕೋಡಿ ಪೊಲೀಸರ ತಂಡ ಆಗಮಿಸಿದಾಗ ಪತ್ತೆಯಾಗಿರಲಿಲ್ಲ. ಇದೀಗ ರವೀಂದ್ರ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ರವೀಂದ್ರ ಬಂಧನದ ಬಗ್ಗೆ ಟ್ವೀಟ್ ಮಾಡಿರುವ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ʻಮೊನ್ನೆ ಜಿಗ್ನೇಶ್, ಇಂದು ಹಾರೋಹಳ್ಳಿ ರವೀಂದ್ರ..!, ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ ಕಾರಣಕ್ಕೆ ದಲಿತಪರ ಹೋರಾಟಗಾರ, ಬರಹಗಾರರನ್ನು ಗುರಿಯಾಗಿಸಿಕೊಂಡು ಬಂಧಿಸುತ್ತಿರುವ ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ನಡೆಯನ್ನು ಖಂಡಿಸುತ್ತೇನೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ದಾಳಿ. ಕೂಡಲೇ ರವೀಂದ್ರ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದಾರೆ.
ಚಿಕ್ಕೋಡಿ ಪಟ್ಟಣದ ಪ್ರಭುವಾಡಿ ನಿವಾಸಿ ಚಂದ್ರಶೇಖರ ಮುಂಡೆ ಎಂಬವರು ಚಿಕ್ಕೋಡಿ ಠಾಣೆಯಲ್ಲಿ ನೀಡಿದ್ದ ದೂರು ಆಧರಿಸಿ ರವೀಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಿಂದೂ ಧರ್ಮ ಹಾಗೂ ಹಿಂದೂ ದೇವರಾದ ಶ್ರೀಕೃಷ್ಣನ ಬಗ್ಗೆ ಉದ್ದೇಶಪೂರ್ವಕವಾಗಿ ಅತ್ಯಂತ ಹೀನಾಯವಾದ ಕೀಳು, ಅಸಹ್ಯ, ವಿಕೃತಿ ಹಾಗೂ ಅಸಂಬದ್ಧ ಪದಗಳನ್ನು ಬಳಸಿ ಮತೀಯ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಪೋಸ್ಟ್ ಹಾಕಿದ್ದಾರೆ. ಎಲ್ಲರಿಗೂ ಹರಿಬಿಟ್ಟಿದ್ದಾರೆ. ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಲ್ಲದೆ, ಇಷ್ಟು ಮೀರಿಯೂ ನೀವು ಜಗಳ ಮಾಡುವುದಾದರೆ ಬನ್ನಿರಿ ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ’ ಎಂದು ಪೋಸ್ಟ್ ಹಾಕಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ’ ಎಂದು ಚಂದ್ರಶೇಖರ ಆರೋಪಿಸಿದ್ದರು.