ಲಕ್ನೋ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಶುಕ್ರವಾರ) ಉತ್ತರ ಪ್ರದೇಶದ ಫತೇಪುರಕ್ಕೆ ಆಗಮಿಸಿದ್ದು, ಅಲ್ಲಿ ಕಳ್ಳನೆಂದು ತಪ್ಪಾಗಿ ಭಾವಿಸಿ ರಾಯ್ ಬರೇಲಿಯ ತುರಬ್ ಅಲಿ ಕಾ ಪೂರ್ವಾದಲ್ಲಿ ಥಳಿಸಿ ಕೊಲ್ಲಲ್ಪಟ್ಟ ದಲಿತ ವ್ಯಕ್ತಿ ಹರಿಓಂ ವಾಲ್ಮೀಕಿಯ ಪೋಷಕರು ಮತ್ತು ಪತ್ನಿಯನ್ನು ಅವರು ಭೇಟಿಯಾಗಿದ್ದಾರೆ.
ರಾಹುಲ್ ಗಾಂಧಿ ಇಂದು ಬೆಳಗ್ಗೆ ವಿಶೇಷ ವಿಮಾನದ ಮೂಲಕ ಚಕೇರಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಬೆಂಗಾವಲು ಪಡೆಯೊಂದಿಗೆ ರಸ್ತೆ ಮಾರ್ಗವಾಗಿ ಫತೇಪುರದ ಕೊತ್ವಾಲಿ ಪ್ರದೇಶದ ತುರಬ್ ಅಲಿ ಕಾ ಪೂರ್ವಾ ನಿವಾಸಿ ಮೃತ ಹರಿಓಂ ವಾಲ್ಮೀಕಿ ಅವರ ಕುಟುಂಬವನ್ನು ಭೇಟಿ ಮಾಡಿದರು. ಆದರೆ ರಾಹುಲ್ ಗಾಂಧಿ ಅವರ ಆಗಮನಕ್ಕೂ ಮುನ್ನ ಇದನ್ನು ವಿರೋಧಿಸಿ ನಿಮ್ಮ ರಾಜಕೀಯಕ್ಕಾಗಿ ಜನರ ನೋವನ್ನು ಬಳಸಿಕೊಳ್ಳಬೇಡಿ ಎಂಬ ಪೋಸ್ಟರ್ ಎಲ್ಲೆಡೆ ಕಾಣಿಸಿಕೊಂಡಿದೆ.
ಕುಟುಂಬವನ್ನು ಬೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್, ಇಂದು ಬೆಳಗ್ಗೆ, ಸರ್ಕಾರವು ನನ್ನನ್ನು ಭೇಟಿಯಾಗದಂತೆ ಹರಿಓಂ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದೆ. ಬಲಿಪಶುಗಳ ಕುಟುಂಬ ನನ್ನನ್ನು ಭೇಟಿಯಾಗುತ್ತದೋ ಇಲ್ಲವೋ ಎಂಬುದು ಮುಖ್ಯವಲ್ಲ. ಆದರೆ ಮುಖ್ಯವಾದುದು ಈ ಜನರು ಅಪರಾಧಿಗಳಲ್ಲ ಎಂಬುವುದು. ಅವರು ಯಾವುದೇ ತಪ್ಪು ಮಾಡಿಲ್ಲ. ನಾನು ಮೃತರ ಕುಟುಂಬವನ್ನು ಭೇಟಿಯಾಗಿ ಅವರ ಮಾತನ್ನು ಆಲಿಸಿದೆ.
ಕಾಂಗ್ರೆಸ್ ಪಕ್ಷ ಮತ್ತು ನಾನು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ದೇಶದಲ್ಲಿ ದಲಿತರ ವಿರುದ್ಧ ದೌರ್ಜನ್ಯಗಳು ಎಲ್ಲೇ ನಡೆದರೂ, ಕಾಂಗ್ರೆಸ್ ಅಲ್ಲಿ ಇರುತ್ತದೆ ಮತ್ತು ನಾವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತೇವೆ ಮತ್ತು ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದು ರಾಹುಲ್ ನುಡಿದಿದ್ದಾರೆ.
ಈ ಪ್ರಕರಣದ ಮುಖ್ಯ ಆರೋಪಿ ದೀಪಕ್ ಅಗ್ರಹಾರಿಯನ್ನು ಕಳೆದ ಶುಕ್ರವಾರ ಎನ್ ಕೌಂಟರ್ ನಡೆಸಿ ಪೊಲೀಸರು ಸೆರೆಹಿಡಿದಿದ್ದಾರೆ. ಆತನ ಕಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆ ನೀಡಿದ ಬಳಿಕ ವಶಕ್ಕೆ ಪಡೆಯಲಾಗಿದೆ. ಆತನ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂಪಾಯಿ ಬಹುಮಾನ ಘೋಷಿಸಲಾಗಿತ್ತು.















