ಮನೆ ಕಾನೂನು ಜನರ ಆರೋಗ್ಯಕ್ಕೆ ಮಾರಕ: ತ್ಯಾಜ್ಯ ಭೂಭರ್ತಿ ಪ್ರದೇಶ ಸುತ್ತಲಿನ ಡೈರಿಗಳ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್ ಆದೇಶ

ಜನರ ಆರೋಗ್ಯಕ್ಕೆ ಮಾರಕ: ತ್ಯಾಜ್ಯ ಭೂಭರ್ತಿ ಪ್ರದೇಶ ಸುತ್ತಲಿನ ಡೈರಿಗಳ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್ ಆದೇಶ

0

ಗಾಜಿಪುರ ಮತ್ತು ಭಾಲಾಸ್ವಾ ತ್ಯಾಜ್ಯ ಭೂಭರ್ತಿ ಪ್ರದೇಶಗಳ ಬಳಿ ಇರುವ ಡೈರಿಗಳು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಅಪಾಯ ಉಂಟುಮಾಡಲಿದ್ದು, ಸರಿಪಡಿಸಲಾಗದಷ್ಟು ಹಾನಿ ಉಂಟುಮಾಡಬಹುದು ಎಂದಿರುವ ದೆಹಲಿ ಹೈಕೋರ್ಟ್‌ ಅವುಗಳ ಸ್ಥಳಾಂತರ ಮಾಡುವುದನ್ನು ದೆಹಲಿ ಸರ್ಕಾರಕ್ಕೆ ಸೂಚಿಸಿದೆ .

Join Our Whatsapp Group

ಎರಡು ಭೂಭರ್ತಿ ಪ್ರದೇಶಗಳ ಬಳಿ ಇರುವ ಡೈರಿಗಳು ಜನರ ಆರೋಗ್ಯಕ್ಕ ಯಾವುದೇ ಗಂಭೀರ ಅಪಾಯ ಉಂಟು ಮಾಡುವುದಿಲ್ಲ ಎಂಬ ಸರ್ಕಾರದ ಸಮರ್ಥನೆ ಸರಿಯಲ್ಲ. ಈ ಡೈರಿಗಳಲ್ಲಿ ಉತ್ಪತ್ತಿಯಾಗುವ ಹಾಲು ಉಂಟು ಮಾಡುವ ಗಂಭೀರ ಹಾನಿ ಬಗ್ಗೆ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ಸ್ಯಾನಿಟರಿ ಭೂಭರ್ತಿ ಸ್ಥಳಗಳಿಗೆ ಹೊಂದಿಕೊಂಡಂತಿರುವ ಡೈರಿಗಳಲ್ಲಿನ ಜಾನುವಾರುಗಳು 2025-26ರವರೆಗೆ [ದಿಲ್ಲಿ ಸರ್ಕಾರ ಭೂಭರ್ತಿ ಸ್ಥಳಗಳನ್ನು ತೆರವುಗೊಳಿಸಲು ಅಂದಾಜಿಸಿರುವ ಸಮಯ] ಆ ಪ್ರದೇಶಗಳಲ್ಲಿ ಅಪಾಯಕಾರಿ ತ್ಯಾಜ್ಯ ಸೇವಿಸದಂತೆ ತಡೆಯಬಹುದು ಎಂಬ ಮುಖ್ಯ ಕಾರ್ಯದರ್ಶಿಯವರ ವಾದ ಈ ನ್ಯಾಯಾಲಯಕ್ಕೆ ಅರ್ಥವಾಗುತ್ತಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಈ ಡೈರಿಗಳಲ್ಲಿ ಉತ್ಪಾದಿಸುವ ಹಾಲು ಸರಿಪಡಿಸಲಾಗದಷ್ಟು ಹಾನಿ ಉಂಟು ಮಾಡುತ್ತದೆ ಎಂದು ಹೇಳಿರುವ ಹೈಕೋರ್ಟ್, ಡೈರಿಗಳು ಕಾನೂನು ಪಾಲಿಸಲು ಅಗತ್ಯವಾದ ನಿರ್ದೇಶನಗಳನ್ನು ನೀಡಿದೆ.

ರಾಷ್ಟ್ರ ರಾಜಧಾನಿಯಲ್ಲಿರುವ ಡೈರಿಗಳು ದೆಹಲಿ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯಿದೆ ಮತ್ತಿತರ ಕಾನೂನುಗಳನ್ನು ಪಾಲಿಸುವಂತೆ ನೋಡಿಕೊಂಡು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಪಶುಸಂಗೋಪನಾ ಇಲಾಖೆಗಳಿಂದ ಅವು ಪರವಾನಗಿ ಪಡೆಯುವಂತೆ ಮಾಡಬೇಕು ಎಂದು  ಅದು ಹೇಳಿದೆ.

ದೆಹಲಿಯ ಡೈರಿ ಕಾಲೋನಿಗಳನ್ನು ಸ್ಥಳಾಂತರಿಸಬೇಕು ಮತ್ತು ಅವು ಕಾನೂನಿಗೆ ಬದ್ಧವಾಗಿರುವಂತೆ ನೋಡಿಕೊಳ್ಳಬೇಕು ಎಂದು ಕೋರಿ ಪ್ರಾಣಿ ಹಕ್ಕು ಕಾರ್ಯಕರ್ತೆ ಸುನಯನಾ ಸಿಬಲ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿದೆ.

ಪ್ರಕರಣದ ಮುಂದಿನ ವಿಚಾರಣೆ ಮೇ 27 ರಂದು ನಡೆಯಲಿದೆ.

ಈ ಹಿಂದೆ ನಡೆದಿದ್ದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಾಜಧಾನಿಯ  ಡೈರಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾದ ದೆಹಲಿ ಸರ್ಕಾರ ಮತ್ತಿತರ ಅಧಿಕಾರಿಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಜನ ಅಶುದ್ಧವಾದ ಹಾಲು ಸೇವಿಸದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿತ್ತು.

ಹಿಂದಿನ ಲೇಖನಹಿರಿಯೂರು: ಹುಣಸೆ ಹಣ್ಣು ತಿಂದು 12 ಕುರಿ ಸಾವು
ಮುಂದಿನ ಲೇಖನನಮ್ಮಲ್ಲಿ ಒಳಜಗಳ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ