ವಿಜಯಪುರ: ರೇಣುಕಾಸ್ವಾಮಿ ಹತ್ಯೆ ಆರೋಪಿ ವಿನಯ್ ಎಂಬಾತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ (ಇಂದು) ಆ.30ರ ಶುಕ್ರವಾರ ವಿಜಯಪುರದ ದರ್ಗಾ ಜೈಲಿಗೆ ಸ್ಥಳಾಂತರ ಮಾಡುವ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಹತ್ಯಾ ಪ್ರಕರಣದ ಆರೋಪಿ ಚಿತ್ರನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೀವನ ವರ್ತನೆಯ ಫೋಟೋ, ವಿಡಿಯೋ ಕರೆಗಳ ಚಿತ್ರಗಳು ಹೊರ ಬೀಳುತ್ತಲೇ ದರ್ಶನ್ ಹಾಗೂ ಸಹಚರರನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ವರ್ಗಾಯಿಸಲು ಕೋರ್ಟ್ ಅನುಮತಿ ನೀಡಿದೆ.
ಈ ಹಿನ್ನೆಲೆ ಆ.29ರ ಗುರುವಾರ ವಿನಯ್ ವಿಜಯಪುರ ಜೈಲಿಗೆ ಸ್ಥಳಾಂತರ ಮಾಡುವ ಮಾಹಿತಿ ಲಭ್ಯವಾಗಿದ್ದರೂ ದರ್ಗಾ ಜೈಲು ಅಧಿಕಾರಿಗಳಿಗೆ ಅಧಿಕೃತವಾಗಿ ಯಾವುದೇ ಮಾಹಿತಿಯೂ ಇರಲಿಲ್ಲ, ವಿನಯ ಹಸ್ತಾಂತರವೂ ಆಗಿರಲಿಲ್ಲ.
ಆದರೆ ಆ.30ರ ಶುಕ್ರವಾರ ದರ್ಗಾ ಜೈಲಿಗೆ ವಿನಯನನ್ನು ಸ್ಥಳಾಂತರ ಮಾಡುವ ಕುರಿತು ವಿಜಯಪುರ ಜೈಲು ಅಧೀಕ್ಷಕತಿಗೆ ಮಾಹಿತಿ ನೀಡಲಾಗಿದೆ.
ಈ ಹತ್ಯಾ ಪ್ರಕರಣದ 10ನೇ ಆರೋಪಿಯಾಗಿರುವ ವಿನಯ್ ಬೆಂಗಳೂರಿನಿಂದ ವಿಜಯಪುರ ಜೈಲಿಗೆ ಸ್ಥಳಾಂತರ ಮಾಡುವ ಕುರಿತು ಕಾನೂನು ಶಿಷ್ಟಾಚಾರದ ಪ್ರಕ್ರಿಯೆ ಮುಗಿಯದ ಕಾರಣ 2 ದಿನಗಳಿಂದ ಮಾಧ್ಯಮ ಪ್ರತಿನಿಧಿಗಳು ಜೈಲು ಎದುರು ಸುದ್ದಿಗಾಗಿ ಕಾಯುವಂತಾಗಿದೆ.
ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ರಸ್ತೆ ಮಾರ್ಗವಾಗಿ ವಿನಯ್ ನನ್ನು ದರ್ಗಾ ಜೈಲಿಗೆ ಕರೆತರಲಾಗುತ್ತಿದೆ. ಆರೋಪಿ ತಮ್ಮ ಜೈಲಿಗೆ ಬರುತ್ತಲೇ ಆತನನ್ನು ಯಾವ ಬ್ಯಾರಕ್ ಅಥವಾ ಸೆಲ್ ನಲ್ಲಿ ಇರಿಸಬೇಕೆಂದು ನಿರ್ಧರಿಸಲಾಗುತ್ತದೆ. ಇತರೆ ಆರೋಪಿಗಳಂತೆ ಆತನನ್ನೂ ನೋಡಿಕೊಳ್ಳುವ ಸಹಜ ಪ್ರಕ್ರಿಯೆ ನಡೆಯಲಿದೆ ಎಂದು ಜೈಲು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.