ಮನೆ ಸುದ್ದಿ ಜಾಲ ದಲಿತರ ಭೂಮಿ-ವಸತಿಗಾಗಿ ದಸಂಸ ಪ್ರತಿಭಟನೆ

ದಲಿತರ ಭೂಮಿ-ವಸತಿಗಾಗಿ ದಸಂಸ ಪ್ರತಿಭಟನೆ

0
Oplus_0

ಯಳಂದೂರು: ಪರಿಶಿಷ್ಟ ಜಾತಿ ವರ್ಗ ಹಾಗೂ ಭೂ ಹೀಣ ತಳ ಮುದಾಯದಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ ಸಕ್ರಮಮೀಕರಣವನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದಲಿತರ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸದಸ್ಯರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಸಿ. ಪುಟ್ಟಮಲ್ಲಯ್ಯ ಮಾತನಾಡಿ, ಈ ರಾಜ್ಯದಲ್ಲಿ ಪರಿಶಿಷ್ಟರೇ ಹೆಚ್ಚಾಗಿದ್ದಾರೆ. ಆದರೆ ಹೊಂದಿರುವ ಭೂಮಿ ಕೇವಲ ಶೇ. ೧೧ ಆಗಿದೆ. ಇದರಲ್ಲಿ ನೀರಾವರಿ ಸೌಲಭ್ಯವೂ ಅತ್ಯಲ್ಪವಾಗಿದೆ. ೭೦ರ ದಶಕದಲ್ಲಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದಿದ್ದರೂ ಸಹ ಜಾತಿವಾದಿ ಹಾಗೂ ಅಧಿಕಾರಿ ಶಾಹಿ ಮಸಲತ್ತಿನಿಂದ ಮತ್ತು ಸರ್ಕಾರದ ಕುತಂತ್ರದಿಂದ ಪಿಡಿಸಿಎಸ್ ಜಮೀನು ಪ್ರಕರಣಗಳಲ್ಲಿ ದಲಿತ ಸಮುದಾಯಗಳು ಕೋರ್ಟ್‌ಗಳಿಗೆ ಅಲೆಯುತ್ತಾ ವಂಚನೆಗೆ ಒಳಗಾಗಿದ್ದಾರೆ. ತಿದ್ದುಪಡಿ ಮಾನ್ಯ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತಾಲೂಕಿನ ಕೆಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ವರ್ಗದ ಜನಾಂಗಕ್ಕೆ ಸೂಕ್ತವಾದ ಸ್ಮಶಾನವಿಲ್ಲ ಹಾಗಾಗಿ ಇಲ್ಲಿಗೆ ಜಾಗವನ್ನು ನಿಗಧಿ ಮಾಡಬೇಕು. ಸರ್ಕಾರಿ ಜಾಗದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನಾಂಗಕ್ಕೆ ವಸತಿ ನಿರ್ಮಾಣ ಮಾಡಿಕೊಂಡಿರುವರಿಗೆ ಇದನ್ನು ಸಕ್ರಮ ಮಾಡಿಕೊಡಬೇಕು.

ದಲಿತರನ್ನು ಅರಣ್ಯ ಭೂಮಿ, ಸಾಮಾಜಿಕ ಅರಣ್ಯೀಕರಣ, ಗೋಮಾಳದ ಜಾಗ ಎಂಬ ನೆಪವೊಡ್ಡಿ ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು, ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ದಲಿತರನ್ನು ಸಂಪೂರ್ಣವಾಗಿ ಭೂಮಿಯಿಂದ ಹೊರದಬ್ಬುವ ಕುತಂತ್ರ ಇದಾಗಿದ್ದು ಇದು ನಿಲ್ಲಬೇಕು. ದರಕಾಸ್ತು ಭೂಮಿ ಸಕ್ರಮೀಕರಣ ಸಭೆ ನಡೆಯುತ್ತಿಲ್ಲ ಇದಕ್ಕೆಲ್ಲಾ ಶಾಸಕರು, ಸಂಬಂಧಪಟ್ಟ ಸಮಿತಿಯ ಅಧ್ಯಕ್ಷರ ನಿರ್ಲಕ್ಷ್ಯತೆಯೇ ಕಾರಣವಾಗಿದೆ. ಹಾಗಾಗಿ ತಳ ಸಮುದಾಯಗಳನ್ನು ಹತ್ತಿಕ್ಕುವ ಈ ಹುನ್ನಾರ ನಿಲ್ಲಬೇಕು. ಜಿಪಿಎಸ್ ಮೂಲಕ ಉಳುಮೆ ಮಾಡುತ್ತಿಲ್ಲವೆಂದು ಸಾವಿರಾರು ಅರ್ಜಿಗಳನ್ನು ವಜಾಗೊಳಿಸಲಾಗುತ್ತಿರುವ ಕ್ರಮ ಖಂಡಿಸಿ ನಮ್ಮ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಶಾಸಕರು, ಇಲಾಖೆಯ ಅಧಿಕಾರಿಗಳು ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ನ್ಯಾಯ ದೊರಕಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವೃಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ತಹಸೀಲ್ದಾರ್ ಎಸ್.ಎಲ್ ನಯನ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಸಮಿತಿಯ ಶಂಕರಮೂರ್ತಿ, ಕಂದಹಳ್ಳಿ ನಾರಾಯಣ, ಮಹದೇವಸ್ವಾಮಿ, ಬಿ. ನಂಜುಂಡಸ್ವಾಮಿ, ಮಾಂಬಳ್ಳಿ ಬಸವರಾಜು, ನಂಜಮ್ಮ, ಶಿವರಾಜ್, ಚಂಗಚಹಳ್ಳಿ ನಾರಾಯಣಸ್ವಾಮಿ, ಜಯರಾಮು, ರವಿ, ಶಿವಯ್ಯ, ಪುಟ್ಟಸ್ವಾಮಿ, ರುದ್ರಯ್ಯ, ಜೆ. ನಾಗರಾಜು, ಪ್ರಸಾದ್, ನಂಜುಂಡಯ್ಯ ಸೇರಿದಂತೆ ಅನೇಕರು ಇದ್ದರು.