ಭಜಿಸಿ ಬದುಕೆಲೋ ಮಾನವಾ,
ಮನಮುಟ್ಟಿ ಶ್ರೀ ಹರಿಯ ||ಪ||
ಅಜ ಸುರೇಂದ್ರಾದಿಗಳು ವಂದಿಸುವ ಪಾದವನು||a.pa||
ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ
ಕಾಕು ಶಕಟನ ತುಳಿದು ಕೊಂದ ಪಾದ
ಲೋಕೇಶನಿಗೆ ಒಲಿದು ಪೂಜೆಗೊಂಬುವ ಪಾದ
ಲೋಕಪಾವನೆ ಗಂಗೆ ಜನಿಸಿದ ಪಾದವನು ||
ಶಿಲೆಯ ಸತಿಯಳನು ಸೌಂದರ್ಯಗೊಳಿಸಿದ ಪಾದ
ಒಲಿದು ಪಾರ್ಥಂಗೆ ಧರೆಯನೊತ್ತಿದ ಪಾದ
ಕೊಲಿಸಿ ಕಾಳಗದಿ ಕೌರವರ ಕೆಡುಹಿದ ಪಾದ
ಬಲಿದ ಕಾಲಿಂಗನನು ತುಳಿದ ಆ ಪಾದವನು|
ಗರುಡ ಶೇಷಾದಿಗಳು ಹೊತ್ತುಕೊಂಡಿಹ ಪಾದ
ಧರೆಯ ಈರಡಿಮಾಡಿ ಅಳೆದ ಪಾದ
ಸಿರಿ ತನ್ನ ತೊಡೆಯ ಮೇಲಿರಿಸಿ ಸೇವಿಸಿದ ಪಾದ
ವರಕಾಗಿನೆಲೆಯಾದಿ ಕೇಶವನ ಪಾದವನು||