ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಅರಮನೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಕಣ್ತುಂಬಿಕೊಳ್ಳಲು ಜನ ಕಾತರರಾಗಿದ್ದಾರೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಕೌಂಟ್ಡೌನ್ ಶುರುವಾಗಿದೆ. ಇದಕ್ಕೂ ಮುನ್ನ ಅಂಬಾವಿಲಾಸ ಅರಮನೆ ಒಳಭಾಗ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. ಜಂಬೂಸವಾರಿ ವೀಕ್ಷಣೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೆ ಸಿದ್ಧತೆಯಾಗಿದೆ.
415ನೇ ದಸರಾ ಮಹೋತ್ಸವಕ್ಕೆ ಅರಮನೆ ನಗರಿ ಮೈಸೂರು ಸಜ್ಜಾಗಿದೆ. ಬೆಳಗ್ಗೆ 9:30ರಿಂದ 10ಕ್ಕೆ ಪಟ್ಟದ ಆನೆ, ಕುದುರೆ, ಹಸು ಮತ್ತು ಖಾಸಾ ಆಯುಧಗಳೊಂದಿಗೆ ಅರಮನೆ ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ ಬೆಳಗ್ಗೆ 9:45ಕ್ಕೆ ವಜ್ರಮುಷ್ಠಿ ಕಾಳಗ ನಡೆಯಲಿದೆ. ಬೆಳಗ್ಗೆ 10:50ರಿಂದ 11:10ಕ್ಕೆ ಬನ್ನಿಪೂಜೆ ನಡೆಯಲಿದೆ. ಬಳಿಕ ಅರಮನೆ ಅಂಗಳದಲ್ಲಿರುವ ಭುವನೇಶ್ವರಿ ದೇಗುಲಕ್ಕೆ ವಿಜಯಯಾತ್ರೆ ನಡೆಯಲಿದೆ. ಬಳಿಕ ವಿಜಯಯಾತ್ರೆ ಅರಮನೆಗೆ ವಾಪಸ್ಸಾಗಲಿದೆ.
ಬೆಳಗ್ಗೆ 10ರಿಂದ 10:30ರ ಸುಮಾರಿಗೆ ಚಾಮುಂಡಿಬೆಟ್ಟದಿಂದ ತಾಯಿ ವಿಗ್ರಹ ಅರಮನೆಗೆ ಬರಲಿದೆ. ಮಧ್ಯಾಹ್ನ 1ರಿಂದ 1:8ರ ಶುಭ ಧನುರ್ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:40ರ ಬಳಿಕ ಚಿನ್ನದ ಅಂಬಾರಿ ಕಟ್ಟಲಾಗುತ್ತೆ. ಸಂಜೆ 4:42ರಿಂದ 5:06 ಗಂಟೆಗೆ ಪುಷ್ಪಾರ್ಚನೆ ನೆರವೇರಲಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ನಡೆಯಲಿದ್ದು, ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಸಂಜೆ 7 ಗಂಟೆಗೆ ಪಂಜಿನ ಕವಾಯತು ನಡೆಯಲಿದೆ.
ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರಲು ರೆಡಿಯಾಗಿದ್ದು, ಸತತ ಆರನೇ ಬಾರಿಗೆ ರಾಜಗಾಂಭೀರ್ಯದಲ್ಲಿ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದಾನೆ. ಅಭಿಮನ್ಯು ಸೇರಿ ಇತರ ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ.
ದಸರಾ ಗಜಪಡೆ –
ಅಂಬಾರಿ ಆನೆ : ಕ್ಯಾಪ್ಟನ್ ಅಭಿಮನ್ಯು, 59 ವರ್ಷ, 6ನೇ ಬಾರಿ ಅಂಬಾರಿ
ಕುಮ್ಕಿ ಆನೆ : ಕಾವೇರಿ ಮತ್ತು ರೂಪ
ನಿಶಾನೆ ಆನೆ : ಧನಂಜಯ , 45 ವರ್ಷ
ನೌಪತ್ ಆನೆ : ಗೋಪಿ, 42 ವರ್ಷ
ಸಾಲಾನೆ : ಭೀಮ, 25 ವರ್ಷ
ಪಟ್ಟದ ಆನೆ : ಶ್ರೀಕಂಠ ಮತ್ತು ಲಕ್ಷ್ಮಿ
ಸಾಲಾನೆಗಳು : ಮಹೇಂದ್ರ, ಭೀಮ, ಕಂಜನ್, ಏಕಲವ್ಯ, ಪ್ರಶಾಂತ, ಸುಗ್ರೀವ, ಹೇಮಾವತಿ ಈ ಆನೆಗಳು ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿವೆ.
ಈ ಬಾರಿ ಅಂಬಾವಿಲಾಸ ಅರಮನೆ ಆವರಣದಲ್ಲಿ 48 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ 60 ಸಾವಿರಕ್ಕೂ ಹೆಚ್ಚು ಜನರಿಗೆ ದಸರಾ ವೀಕ್ಷಣೆಗೆ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಇತ್ತೀಚಿನ ಕೆಲ ಕಾಲ್ತುಳಿತ ಅವಘಢ ಹಿನ್ನೆಲೆ ಸರ್ಕಾರ ಮತ್ತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ವೀಕ್ಷಕರ ಸಂಖ್ಯೆ ಇಳಿಕೆ ಮಾಡಿದೆ.
ಅಲ್ಲದೇ ಒಳಭಾಗದಲ್ಲಿ ಪೊಲೀಸ್ ಭದ್ರತೆ ಕೂಡ ಹೆಚ್ಚು ಮಾಡಿದೆ. ಇನ್ನೂ ಪಾಸ್ ಇದ್ದವರಿಗೆ ಮಾತ್ರ ಅರಮನೆ ಒಳಭಾಗ ದಸರಾ ವೀಕ್ಷಣೆಗೆ ಅವಕಾಶ ನೀಡಿಲಾಗಿದೆ. ಸಿಎಂ ಸೇರಿದಂತೆ ಹಲವು ಕ್ಯಾಬಿನೆಟ್ ಸಚಿವರು ಕೂಡ ಜಂಬೂಸವಾರಿಯಲ್ಲಿ ಭಾಗಿಯಾಗಲಿದ್ದಾರೆ. ಗಣ್ಯರು, ಅಧಿಕಾರಿಗಳು, ಸಾರ್ವಜನಿಕರು, ರಾಜಮನೆತನದ ಕುಟುಂಬಸ್ಥರು, ನ್ಯಾಯಾಧೀಶರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 11ಗಂಟೆ ನಂತರ ಪಾಸ್ ಹೊಂದಿರುವ ಸಾರ್ವಜನಿಕರಿಗೆ ಅರಮನೆ ಪ್ರವೇಶ ನೀಡಲಾಗುತ್ತೆ. ಈಗಾಗಲೇ ನಗರ ವ್ಯಾಪ್ತಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 9 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆಯಾಗಿದೆ.
ಅಂಬಾರಿ ಸಾಗುವ ರಾಜಮಾರ್ಗ ಸೇರಿದಂತೆ ನಗರ ವ್ಯಾಪ್ತಿ ಹೆಚ್ಚಿನ ಸಿಸಿಟಿವಿ ಅಳವಡಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಅಲ್ಲದೇ ಅಂಬಾರಿ ಸಾಗುವ ಮಾರ್ಗದುದ್ದಕ್ಕೂ ರಸ್ತೆಬದಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಿದ್ದು, ಅಂಬಾರಿ ಸಾಗುವಾಗ ಜನ ದಾಟಿ ರಸ್ತೆಗೆ ಬಾರದಂತೆ ಕ್ರಮವಹಿಸಲಾಗಿದೆ.
ಒಟ್ಟಾರೆ ಜಂಬೂಸವಾರಿಗೆ ಸಕಲ ಸಿದ್ಧತೆಗಳೆಲ್ಲಾ ಆಗಿದ್ದು, ಅಂಬಾರಿ ಹೊತ್ತು ಸಾಗುವ ಅಭಿಮನ್ಯು ರಾಜಗಾಂಭೀರ್ಯತೆಯೊಂದಿಗೆ ತಾಯಿ ಚಾಮುಂಡೇಶ್ವರಿ ಆಶೀರ್ವಾದಕ್ಕೂ ಜನರು ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.















