ಡಿಜಿಟಲ್ ಯುಗದಲ್ಲಿ ದತ್ತಾಂಶ ಕಳವು ಒಂದು ಪಿಡುಗಾಗಿದ್ದು, ಅದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ.
ಖಾಸಗಿ ಕಂಪೆನಿಯ ದತ್ತಾಂಶ ಕದ್ದ ಬಳಿಕ ಮತ್ತೊಂದು ಕಂಪೆನಿ ಸೇರಿದ್ದ ಬೆಂಗಳೂರು ಮೂಲದ ಇಬ್ಬರು ಉದ್ಯೋಗಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
“ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದರೆ ಹಲವು ಪ್ರಶ್ನೆಗಳು ಎದುರಾಗುತ್ತವೆ. ಈ ಹಂತದಲ್ಲಿ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಅರ್ಜಿದಾರರ ವಿರುದ್ಧ ಒಂದು ಕಂಪೆನಿಯ ದತ್ತಾಂಶ ಪಡೆದು ಅದನ್ನು ಮತ್ತೊಂದು ಎದುರಾಳಿ ಕಂಪೆನಿಯ ವ್ಯಾಪಾರ ಅಭಿವೃದ್ಧಿಗೆ ಬಳಸಿಕೊಂಡಿರುವ ಆರೋಪವಿದೆ. ಇದು ಕಂಪೆನಿಯ ಮಾಹಿತಿ ಅಥವಾ ದತ್ತಾಂಶ ಸೋರಿಕೆ ಮಾಡುವಂತಿಲ್ಲ ಎಂಬ ಒಪ್ಪಂದದ ಉಲ್ಲಂಘನೆಯಾಗಿದೆ. ಇದು ಅಪರಾಧವಾಗುತ್ತದೆ” ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ವಿರುದ್ಧದ ಆರೋಪಕ್ಕೆ ಯಾವುದೇ ಸೂಕ್ತ ಸಾಕ್ಷ್ಯಧಾರಗಳಿಲ್ಲ. ಗ್ರಾಹಕರ ದತ್ತಾಂಶ ಅದಾಗಲೇ ಸಾರ್ವಜನಿಕ ವಲಯದಲ್ಲಿದೆ. ಹೀಗಿರುವಾಗ ಅದನ್ನು ಕಳವು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ, ಪ್ರಕರಣ ರದ್ದುಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ತಿರಸ್ಕರಿಸಿರುವ ಪೀಠವು ಅರ್ಜಿ ವಜಾಗೊಳಿಸಿದೆ.
ಪ್ರಕರಣ ಹಿನ್ನೆಲೆ: ಅರ್ಜಿದಾರರು ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಂಪೆನಿಗೆ ಸಂಬಂಧಿಸಿದ ದತ್ತಾಂಶ ಕಳುವು ಮಾಡಿದ ಆರೋಪ ಅವರ ಮೇಲಿದೆ. ಈ ಇಬ್ಬರು ಸಂಸ್ಥೆಗೆ ಸೇರಿದ ಕೆಲ ದತ್ತಾಂಶ ಕದ್ದು, ಮತ್ತೊಂದು ಕಂಪೆನಿಗೆ ನೀಡಿದ್ದು, ಆ ಮೂಲಕ ಕಂಪೆನಿಯ ಮಾಹಿತಿ ಹಂಚಿಕೊಳ್ಳುವಂತಿಲ್ಲ ಎಂಬ ಕರಾರನ್ನು ಉಲ್ಲಂಘಿಸಿರುವುದು ತನ್ನ ಆಂತರಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಅವರ ವಿರುದ್ಧ ಪ್ರಕರಣ ದಾಖಲಿಸಿರುವ ಕಂಪೆನಿಯು ಆರೋಪಿಸಿದೆ.
ಹಿಂದಿನ ಕಂಪೆನಿಯ ಮಾಲೀಕರು ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 408, 504, 506 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ರ ಅಡಿ ಪ್ರಕರಣ ದಾಖಲಾಗಿದೆ.














