ಮನೆ ದೇವಸ್ಥಾನ ಹಾಸನಾಂಬೆ ದರ್ಶನಕ್ಕೆ ದಿನಾಂಕ ಘೋಷಣೆ: ಆ್ಯಪ್​ ಬಿಡುಗಡೆ

ಹಾಸನಾಂಬೆ ದರ್ಶನಕ್ಕೆ ದಿನಾಂಕ ಘೋಷಣೆ: ಆ್ಯಪ್​ ಬಿಡುಗಡೆ

0

ಹಾಸನ, ಅಕ್ಟೋಬರ್​​ 01: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನೋತ್ಸವಕ್ಕೆ ದಿನ ಗಣನೆ ಶುರುವಾಗಿದೆ.

Join Our Whatsapp Group

ಅಕ್ಟೋಬರ್ 24 ರಿಂದ ನವೆಂಬರ್ 3ರವರೆಗೆ ಒಟ್ಟು 11 ದಿನ ದೇಗುಲದ ಬಾಗಿಲು ತೆರೆಯಲಿದ್ದು, ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ ಉಳಿದ 9 ದಿನಗಳು ಭಕ್ತರಿಗೆ ದರ್ಶನಕ್ಕೆ ಅವಕಾಶ ಸಿಗಲಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಿನಿಂದಲೇ ತಯಾರಿ ಆರಂಭಿಸಿದೆ.

ಈ ವರ್ಷ ಭಕ್ತರಿಗೆ ದೇವಿನ ದರ್ಶನ, ಟಿಕೇಟ್ ಖರೀದಿ ಸೇರಿದಂತೆ ಅಗತ್ಯ ಮಾಹಿತಿ ನೀಡುವ ಸಲುವಾಗಿ ಹಾಸನಾಂಬ ಹೆಸರಿನ ಆ್ಯಪ್ ತೆರೆಯಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಲೈವ್ ಹಾಗೂ ಸಂಪೂರ್ಣ ಮಾಹಿತಿಗಳು ಸಿಗಲಿವೆ. ದಸರಾ ಮಾದರಿಯ ಲೈಟಿಂಗ್, ಲಾಲ್ ಬಾಗ್ ಮಾದರಿಯ ಪುಷ್ಪಾಲಂಕಾರ ಹಾಗೂ ಫಲ ಪುಷ್ಪ ಪ್ರದರ್ಶನಕ್ಕೆ ತಯಾರಿ ನಡೆದಿದೆ.

ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಸೋಮವಾರ ಹಾಸನಾಂಬ ಹೆಸರಿನ ಆ್ಯಪ್ ಬಿಡುಗಡೆ ಮಾಡಿದರು. ಆ್ಯಪ್​ನಲ್ಲಿ ದೇವಾಲಯದ ದರ್ಶನದ ಬಗ್ಗೆ ಸಂಪೂರ್ಣ ಮಾಹಿತಿ, ನೇರ ದರ್ಶನಕ್ಕೆ ಟಿಕೇಟ್ ಖರೀದಿ ಹಾಗೂ ದರ್ಶನದ ಸಮಯಗಳು ಹಾಗೂ ಕ್ಷೇತ್ರದ ಮಹಿಮೆ ಹಾಗು ನಿತ್ಯ ದರ್ಶನದ ಮಾಹಿತಿ ಒಳಗೊಂಡಿರುತ್ತದೆ.

ಜೊತೆಗೆ ಪೋಸ್ಟರ್ ಬಿಡುಗಡೆ ಮಾಡಿದ ಸಚಿವರು, “ಕಳೆದ ವರ್ಷ ಆದ ಕೆಲ ತಪ್ಪುಗಳನ್ನು ಸರಿಮಾಡಿಕೊಂಡು ಈ ವರ್ಷ ಅದ್ದೂರಿಯಾಗಿ ಹಾಸನಾಂಬೆ ಉತ್ಸವ ನಡೆಸಲು ತಯಾರಿ ನಡೆಸಲಾಗಿದೆ. ಕಳೆದ ವರ್ಷ 14 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದಿದ್ದು, ಈ ವರ್ಷ ಸಂಖ್ಯೆ ಮತ್ತಷ್ಟು ಏರಿಕೆ ಆಗಲಿದೆ. ಹೀಗಾಗಿ ಬರುವ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸಿ” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೆಲಿ ಟೂರಿಸಂ, ಪ್ಯಾರಾ ಗ್ಲೈಡಿಂಗ್, ಹಾಸನದ ಐತಿಹಾಸಿಕ ತಾಣಗಳ ಪ್ಯಾಕೇಜ್ ಟೂರ್ ಸೇರಿದಂತೆ ಸಾಕಷ್ಟು ವಿಶೇಷ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲು ತಯಾರಿ ನಡೆಸಲಾಗಿದೆ. ಜಿಲ್ಲಾಡಳಿತ ಸಕಲ ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದು ಕೆಲ ತೊಡಕು ನಿವಾರಿಸಿ ಎಲ್ಲಾ ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳು ಸಿದ್ದರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.