ಮನುಷ್ಯನ ಆರೋಗ್ಯಕ್ಕೆ ಕೆಟ್ಟ ಕೊಲೆಸ್ಟ್ರಾಲ್ ತುಂಬಾ ಡೇಂಜರ್. ಇದು ಹೃದಯದ ಬಡಿತದಲ್ಲಿ ವ್ಯತ್ಯಾಸ ಕಾಣುವಂತೆ ಮಾಡುತ್ತದೆ. ಹೃದಯ ರಕ್ತನಾಳಗಳಲ್ಲಿ ಕಾಯಿಲೆಯನ್ನು ತಂದು ಕೊಡುತ್ತದೆ.
ಕೊನೆಗೆ ಹೃದಯಸ್ತಂಭನ ಮಾಡಿ ಮನುಷ್ಯನನ್ನು ಪರಮನೆಂಟ್ ಆಗಿ ಮಲಗಿಸುತ್ತದೆ. ಕೊಲೆಸ್ಟ್ರಾಲ್ ನಿವಾರಣೆ ಅಥವಾ ಅತ್ಯಂತ ಸಮರ್ಪಕವಾಗಿ ನಿರ್ವಹಣೆ ಮಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ವಿಶೇಷವಾಗಿ ಆರೋಗ್ಯಕರವಾದ ಆಹಾರಗಳನ್ನು ತಿನ್ನಬೇಕು.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ
ಪ್ರಪಂಚದಲ್ಲಿ ಸಿಗುವಂತಹ ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರ ಪದಾರ್ಥಗಳಲ್ಲಿ ಖರ್ಜೂರ ಸಹ ಒಂದು. ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳನ್ನು ಇದು ಪರಿಹರಿಸುತ್ತದೆ.
ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ಪಾರ್ಶ್ವವಾಯು ಇತ್ಯಾದಿಗಳನ್ನು ಇದು ದೂರ ಮಾಡುತ್ತದೆ ಎಂದು ತಿಳಿದುಬಂದಿದೆ.
ಕೆಟ್ಟ ಕೊಲೆಸ್ಟ್ರಾಲ್ ಕಥೆ ಏನು?
ಮನುಷ್ಯನ ದೇಹದಲ್ಲಿ ಎರಡು ತರಹದ ಕೊಲೆಸ್ಟ್ರಾಲ್ ಇರುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಅಥವಾ ಎಚ್ ಡಿ ಎಲ್, ಇನ್ನೊಂದು ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್ಡಿಎಲ್.
ಕೆಟ್ಟ ಕೊಲೆಸ್ಟ್ರಾಲ್ ಹೃದಯಕ್ಕೆ ಬಹಳ ಮಾರಕ. ಖರ್ಜೂರ ತಿನ್ನುವುದರಿಂದ ಇದು ಕಡಿಮೆ ಯಾಗುತ್ತದೆ ಎಂದು ಹೇಳುತ್ತಾರೆ. ರಕ್ತನಾಳಗಳು ಶುದ್ಧವಾಗುತ್ತವೆ ಮತ್ತು ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುವುದಿಲ್ಲ.
ದಿನಾ ಒಂದೆರಡು ಖರ್ಜೂರಗಳನ್ನು ಸೇವನೆ ಮಾಡಿ
ನಿಮ್ಮ ಆಹಾರ ಪದ್ಧತಿಯಲ್ಲಿ ಪ್ರತಿ ದಿನ ಯಾವುದಾದರೂ ಒಂದು ರೂಪದಲ್ಲಿ ಅಥವಾ ಯಾವುದಾದರೂ ಸಮಯದಲ್ಲಿ ಒಂದೆರಡು ಖರ್ಜೂರವನ್ನು ಸೇವನೆ ಮಾಡುವುದರಿಂದ ಆರೋಗ್ಯಕರವಾದ ಜೀವನ ನಡೆಸಬಹುದು.
ಕಡಿಮೆ ಕೊಬ್ಬಿನ ಅಂಶ ಇರುವ ಜನರಿಗೆ ಅಷ್ಟಾಗಿ ಹೃದಯದ ತೊಂದರೆ ಇರುವುದಿಲ್ಲ. ಹಾಗಾಗಿ ಖರ್ಜೂರವನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದು ಕ್ರಮೇಣವಾಗಿ ನಿಮ್ಮ ರಕ್ತದ ಒತ್ತಡ ಮತ್ತು ಪಾರ್ಶ್ವವಾಯು ಸಮಸ್ಯೆಯನ್ನು ಸಹ ಪರಿಹರಿಸುತ್ತದೆ.
ಖರ್ಜೂರಗಳಲ್ಲಿ ಸಿಗುವ ಪೌಷ್ಟಿಕ ಸತ್ವಗಳು
ಖರ್ಜೂರಗಳಲ್ಲಿ ಸಹ ಯಾವುದೇ ಕೊಬ್ಬಿನ ಅಂಶ ಅಥವಾ ಕೊಲೆಸ್ಟ್ರಾಲ್ ಅಂಶ ಇರುವುದಿಲ್ಲ. ಖರ್ಜೂರಗಳನ್ನು ವಿಟಮಿನ್ ಮತ್ತು ಖನಿಜಾಂಶಗಳು ಸಾಕಷ್ಟು ಕಂಡು ಬರುತ್ತವೆ.
ಉದಾಹರಣೆಗೆ ಜಿಂಕ್, ಪೊಟಾಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ಮೆಗ್ನೀಷಿಯಂ ಇತ್ಯಾದಿಗಳು. ಇನ್ಸುಲಿನ್ ಉತ್ಪತ್ತಿಯಲ್ಲಿ ಜಿಂಕ್ ಸಹಾಯ ಮಾಡುತ್ತದೆ ಅದೇ ರೀತಿ ರಕ್ತದಲ್ಲಿ ಸಕ್ಕರೆ ಪ್ರಮಾಣ ವನ್ನು ನಿರ್ವಹಣೆ ಮಾಡಲು ಮೆಗ್ನೀಷಿಯಂ ಸಹಾಯ ಮಾಡುತ್ತದೆ.
ಎಷ್ಟು ಪ್ರಮಾಣದಲ್ಲಿ ಖರ್ಜೂರಗಳನ್ನು ಸೇವನೆ ಮಾಡಬೇಕು?
ನೀವು ಇದಕ್ಕಾಗಿ ಸ್ನ್ಯಾಕ್ಸ್ ರೂಪದಲ್ಲಿ ಖರ್ಜೂರವನ್ನು ತಿನ್ನಬಹುದು. ಆರೋಗ್ಯಕರವಾದ ಆಹಾರ ಪದ್ಧತಿಯಲ್ಲಿ ದಿನಕ್ಕೆ ಐದರಿಂದ ಆರು ಖರ್ಜೂರಗಳು ಸಾಕಾಗುತ್ತವೆ. ನೈಸರ್ಗಿಕವಾಗಿ ಇವುಗಳಲ್ಲಿ ಸಕ್ಕರೆ ಪ್ರಮಾಣ ಇರುವುದರಿಂದ.
ನೀವು ಹೆಚ್ಚುವರಿಯಾಗಿ ಸಕ್ಕರೆ ಹಾಕುವ ಅವಶ್ಯಕತೆ ಇಲ್ಲ. ಅದರಲ್ಲೂ ಒಂದು ವೇಳೆ ನಿಮಗೆ ಮಧುಮೇಹ ಇದ್ದರೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಖರ್ಜೂರಗಳನ್ನು ಸೇವನೆ ಮಾಡಬಹುದು.