ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಧರ್ಮಗಳ ಸಂಪ್ರದಾಯಗಳಂತೆ ಪೂಜಾ ವಿಧಿ ವಿಧಾನ ನೆರವೇರಿಸಲು ಅವಕಾಶ ಕಲ್ಪಿಸಲು ಕೈಗೊಂಡಿರುವ ನಿರ್ಣಯದ ಕುರಿತು ರಾಜ್ಯ ಸರ್ಕಾರ ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ತಮ್ಮನ್ನು ನೇಮಿಸಿ 2018ರಲ್ಲಿ ಅಂದಿನ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಸರ್ಕಾರದ ವಕೀಲರು ಮೆಮೊ ಸಲ್ಲಿಸಿದ್ದಾರೆ. ಮೆಮೊವನ್ನು ಮೇಲ್ಮನವಿದಾರರಿಗೆ ಒದಗಿಸಬೇಕು. ಸರ್ಕಾರದ ನಿರ್ಧಾರಕ್ಕೆ ಅರ್ಜಿದಾರರಿಗೆ ಯಾವುದಾದರೂ ಆಕ್ಷೇಪಣೆಯಿದ್ದರೆ ಸಲ್ಲಿಸಬಹುದು ಎಂದು ಸೂಚಿಸಿ, ಅರ್ಜಿ ವಿಚಾರಣೆಯನ್ನು ಪೀಠವು ಸೆಪ್ಟೆಂಬರ್ 5ಕ್ಕೆ ಮುಂದೂಡಿತು.
ಅಲ್ಲದೇ, ಸಮಿತಿಯ ನಿರ್ಣಯವು ಈ ಮೇಲ್ಮನವಿ ಕುರಿತ ವಿಭಾಗೀಯ ಪೀಠದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಒಂದೊಮ್ಮೆ ಈ ಅವಧಿಯಲ್ಲಿ ಸರ್ಕಾರವು ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಾನದಲ್ಲಿ ಯಾವುದೇ ಮಾರ್ಪಾಡು ಮಾಡಿದರೆ, ಆ ಕುರಿತು ಪ್ರಶ್ನಿಸಿ ಸೂಕ್ತ ಅರ್ಜಿ ಸಲ್ಲಿಸಲು ಪಕ್ಷಕಾರರಿಗೆ ಅವಕಾಶವಿದೆ ಎಂದು ತಿಳಿಸಿ 2022ರ ಮೇ 31ರಂದು ಹೊರಡಿಸಿರುವ ಏಕ ಸದಸ್ಯ ಪೀಠದ ಆದೇಶವು ಸೆಪ್ಟೆಂಬರ್ 5ರವರೆಗೆ ಮುಂದುವರಿಯುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “2021ರ ಸೆಪ್ಟೆಂಬರ್ 28ರ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶದಂತೆ ಸರ್ಕಾರ ರಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯು ಪ್ರಕರಣ ಮರು ಪರಿಶೀಲನೆ ನಡೆಸಿ 2022ರ ಜೂನ್ 30ರಂದು ವರದಿ ಸಲ್ಲಿಸಿತ್ತು. ವರದಿಯಲ್ಲಿ 10 ಶಿಫಾರಸು ಮಾಡಲಾಗಿದ್ದು, ಅದನ್ನು ಸಚಿವ ಸಂಪುಟ ಅನುಮೋದಿಸಿದೆ” ಎಂದು ಮಾಹಿತಿ ನೀಡಿದರು.
“ಸಚಿವ ಸಂಪುಟ ಉಪ ಸಮಿತಿಯ ವರದಿ ಆಧರಿಸಿ ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಸಂಪ್ರದಾಯಗಳದಂತೆ ಪೂಜಾ ವಿಧಿ ವಿಧಾನ ನೆರವೇರಿಸುವುದಕ್ಕೆ ಅವಕಾಶ ಕಲ್ಪಿಸಲು 2022ರ ಜುಲೈ 1ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ದತ್ತಾತ್ರೇಯ ಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ಮತ್ತು ಅರ್ಚಕರನ್ನು ನೇಮಿಸಲು 2022ರ ಜುಲೈ 19ರಂದು ಆದೇಶಿಸಲಾಗಿದೆ. ಅಲ್ಲದೇ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಲಾಗಿದೆ” ಎಂದು ವಿವರಿಸಿದರು.
ಅರ್ಜಿದಾರರ ಪರ ವಕೀಲರು “ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಣಯದ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಸರ್ಕಾರ ಸಲ್ಲಿಸಿರುವ ಮೊಮೊ ಪ್ರತಿ ಸಹ ನಮಗೆ ತಲುಪಿಲ್ಲ. ಆದ್ದರಿಂದ, ಸರ್ಕಾರದ ಮೆಮೊಗೆ ಉತ್ತರಿಸಲು ತಮಗೆ ಅವಕಾಶ ನೀಡಬೇಕು. ಅಲ್ಲಿಯವರೆಗೆ 2022ರ ಮೇ 31ರಂದು ನ್ಯಾಯಾಲಯ ಹೊರಡಿಸಿರುವ ಮಧ್ಯಂತರ ಆದೇಶವನ್ನು ವಿಸ್ತರಿಸಬೇಕು” ಎಂದು ಕೋರಿದರು.