ಬೆಂಗಳೂರು: ಅತ್ತೆ-ಮಾವನ ವಿರುದ್ಧ ಸೊಸೆ ಸಿಆರ್ಪಿಸಿ ಸೆಕ್ಷನ್ 125 ರ ಅಡಿ ಜೀವನಾಂಶದ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸೊಸೆಗೆ ಜೀವನ ನಿರ್ವಹಣೆಗಾಗಿ ಹಣ ನೀಡುವಂತೆ ಅತ್ತೆ-ಮಾವನಿಗೆ ಆದೇಶಿಸಿದ್ದ ಬಳ್ಳಾರಿಯ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ಸಿಆರ್‌ಪಿಸಿ ಸೆಕ್ಷನ್ 125ರ ಅನ್ವಯ ಸೊಸೆಗೆ ಹಾಗೂ ಮೊಮ್ಮಕ್ಕಳಿಗೆ ಮಾಸಿಕ 25 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಸೂಚಿಸಿದ್ದ ಬಳ್ಳಾರಿಯ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ದಂಪತಿ (ಅತ್ತೆ-ಮಾವ) ಹೈಕೋರ್ಟ್ ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಸಿಆರ್‌ಪಿಸಿ ಸೆಕ್ಷನ್ 125 ರ ಅಡಿ ಪತಿಯಿಂದ ಪತ್ನಿ ಜೀವನಾಂಶ ಕೋರಬಹುದು. ಹಾಗೆಯೇ ಹೆತ್ತವರು ಮಕ್ಕಳಿಂದ ಕೋರಬಹುದು. ಹಾಗೆಯೇ ಅಪ್ರಾಪ್ತ/ಅರ್ಹ ಮಕ್ಕಳು ತಂದೆಯಿಂದ ಕೇಳಬಹುದು. ಆದರೆ ಈ ನಿಮಯದ ಅಡಿ ಸೊಸೆಯು ಅತ್ತೆ-ಮಾವನ ವಿರುದ್ಧ ಜೀವನಾಂಶ ಕೇಳಲು ಸಾಧ್ಯವಿಲ್ಲ ಎಂದು ಹೇಳಿ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿದೆ.
ವಿಚಾರಣೆ ವೇಳೆ ಪ್ರತಿವಾದಿ (ಸೊಸೆ) ಪರ ವಾದಿಸಿದ್ದ ವಕೀಲರು, ಪತಿಯ ನಿಧನದ ಬಳಿಕ ಪತ್ನಿ ಹಾಗೂ ಮಕ್ಕಳ ಕುರಿತು ಅತ್ತೆ ಮಾವ ಕಾಳಜಿ ವಹಿಸುವಲ್ಲಿ ವಿಫಲರಾಗಿದ್ದಾರೆ.
ಹೀಗಾಗಿ ಜೀವನ ನಿರ್ವಹಣೆಗಾಗಿ ಅತ್ತೆ- ಮಾವನ ಬಳಿ ಜೀವನಾಂಶ ಕೋರಿದ್ದಾರೆ. ಇದು ಆಕೆ ಜೀವನ ನಡೆಸಲು ಅಗತ್ಯವೂ ಹೌದು. ಆದ್ದರಿಂದ ಜೀವನಾಂಶ ನೀಡುವುದು ಸೂಕ್ತ. ಈ ನಿಟ್ಟಿನಲ್ಲಿ ದಂಪತಿ (ಅತ್ತೆ-ಮಾವ) ಸಲ್ಲಿಸಿರುವ ಮರುಪರಿಶೀಲನಾ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.