ಮನೆ ಕಾನೂನು ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಪಾಲಿದೆ: ಹೈಕೋರ್ಟ್ ಪುನರುಚ್ಛಾರ

ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಪಾಲಿದೆ: ಹೈಕೋರ್ಟ್ ಪುನರುಚ್ಛಾರ

0

ಬೆಂಗಳೂರು: ತಂದೆಯ ಆಸ್ತಿಯಲ್ಲಿ ಪುತ್ರನ ಜತೆಗೆ ಪುತ್ರಿಗೂ ಸಮಾನ ಪಾಲಿದೆ ಎಂದು ಹೈಕೋರ್ಟ್ ಪುನರುಚ್ಚರಿಸಿದೆ.

Join Our Whatsapp Group

ತಂದೆಯು ಜಮೀನು ಅಡಮಾನವಿಟ್ಟು ಸಹೋದರಿಗೆ ಮದುವೆ ನೆರವೇರಿಸಿದ್ದು, ಚಿನ್ನಾಭರಣ ಕೊಡಿಸಿದ್ದಾರೆ. ತಂದೆಯ ಸಾಲ ತೀರಿಸಿ ಜಮೀನು ಹಿಂಪಡೆಯಲಾಗಿದೆ. ಹಾಗಾಗಿ, ಸಹೋದರಿಗೆ ತಂದೆ ಆಸ್ತಿ ಮೇಲೆ ಸಮಾನ ಹಕ್ಕು ಇಲ್ಲ ಮತ್ತು ಆಕೆಗೆ ಆಸ್ತಿಯಲ್ಲಿ ಪಾಲು ಕೊಡಲಾಗದು ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.

ತುಮಕೂರಿನ ಯಲ್ಲಾಪುರದ ವೆಂಕಟೇಶ ಮತ್ತು ಅವರ ತಾಯಿ ವೆಂಕಟ ಲಕ್ಷ್ಮಮ್ಮ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ತಂದೆಯ ಸಾಲ ತೀರಿಸಿದ ಕೂಡಲೇ ವ್ಯಾಜ್ಯಕ್ಕೆ ಸಂಬಂಧಿಸಿದ ಜಮೀನಿನ ಮೇಲೆ ವೈಯಕ್ತಿಕ ಹಕ್ಕು ಸೃಷ್ಟಿಸುವುದಿಲ್ಲ. ವಿವಾದಿತ ಜಮೀನು ಗೋವಿಂದಯ್ಯ ಅವರ ಸ್ವಯಾರ್ಜಿತ ಎಂಬುದನ್ನು ಸಾಬೀತುಪಡಿಸುವಲ್ಲಿ ಮೇಲ್ಮನವಿದಾರರು ವಿಫಲವಾಗಿದ್ದಾರೆ ಎಂದು ನ್ಯಾಯಪೀಠ ಕಲಗಿರಿಯಪ್ಪ ಆಸ್ತಿಯಲ್ಲಿ ಲಕ್ಷ್ಮೇ ದೇವಮ್ಮ ಅವರಿಗೂ ಸಮಾನ ಪಾಲಿದೆ ಎಂದು ಆದೇಶಿಸಿದೆ.

ಈ ಹಿಂದೆ ವಿನೀತಾ ಶರ್ಮಾ ಪ್ರಕರಣದಲ್ಲಿ ತಂದೆಯ ಆಸ್ತಿಯಲ್ಲಿ ಪುತ್ರನಿಗೆ ಸರಿಸಮನಾದ ಪಾಲು ಪಡೆಯಲು ಪುತ್ರಿ ಸಹ ಅರ್ಹರಾಗಿರುತ್ತಾರೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದರಂತೆ ಈ ಪ್ರಕರಣದಲ್ಲಿ ಮೇಲ್ಮನವಿದಾರ ವೆಂಕಟೇಶ್ ಅವರ ಸೋದರತ್ತೆಯಾದ ಲಕ್ಷ್ಮಿದೇವಮ್ಮ ಸಹ ಅವರ ತಂದೆಯ ಆಸ್ತಿಯಲ್ಲಿಪಾಲು ಹೊಂದಲು ಅರ್ಹರಾಗಿದ್ದಾರೆ ಎಂದು ಆದೇಶಿಸಿದೆ.

ಪ್ರಕರಣದ ವಿವರ

ಯಲ್ಲಾಪುರ ಗ್ರಾಮದ ಕಲಗಿರಿಯಪ್ಪ ಎಂಬುವರಿಗೆ ಲಕ್ಷ್ಮೇದೇವಮ್ಮ ಮತ್ತು ಕೆ.ಗೋವಿಂದಯ್ಯ ಎಂಬ ಮಕ್ಕಳು ಇದ್ದಾರೆ. ತಂದೆಯ ಆಸ್ತಿಯಲ್ಲಿ ಪಾಲು ಕೋರಿ 2011ರಲ್ಲಿ ಸಿವಿಲ್ ದಾವೆ ಹೂಡಿದ್ದ ಲಕ್ಷ್ಮೇ ದೇವಮ್ಮ, ತಂದೆ ಕಲಗಿರಿಯಪ್ಪ ಹೆಸರಿನಲ್ಲಿ 1943 ರಿಂದ 1949 ವರೆಗೆ ವಿವಾದಿತ ಜಮೀನು ನೋಂದಣಿಯಾಗಿದೆ. 1964ರಲ್ಲಿ ತಂದೆ ಮೃತಪಟ್ಟಿದ್ದಾರೆ. ತಂದೆಯ ಆಸ್ತಿಯು ಸಹೋದರ ಗೋವಿಂದಯ್ಯ ಸ್ವಾಧೀನದಲ್ಲಿದೆ. ಸಹೋದರ ಸಹ ಸಾವನ್ನಪ್ಪಿದ್ದು, ಆತನ ಪತ್ನಿ ಮತ್ತು ಮಕ್ಕಳು ಆಸ್ತಿ ಅನುಭವಿಸುತ್ತಿದ್ದಾರೆ. ಹಾಗಾಗಿ, ಆಸ್ತಿಯಲ್ಲಿ ತನಗೂ ಪಾಲು ನೀಡುವಂತೆ ಸಹೋದರನ ಪುತ್ರ ಮತ್ತು ಪತ್ನಿಗೆ ಆದೇಶಿಸಬೇಕು ಎಂದು ಕೋರಿದ್ದರು.

ದಾವೆಯ ವಿಚಾರಣೆ ನಡೆಸಿದ್ದ ಸಿವಿಲ್ ನ್ಯಾಯಾಲಯ, ಲಕ್ಷ್ಮೇದೇವಮ್ಮಗೆ ತಂದೆಯ ಆಸ್ತಿಯಲ್ಲಿ ಪಾಲು ಇದೆ ಎಂದು 2018ರಲ್ಲಿಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಗೋವಿಂದಯ್ಯ ಪುತ್ರ ವೆಂಕಟೇಶ್ ಮತ್ತು ಪತ್ನಿ ವೆಂಕಟಲಕ್ಷ್ಮಪ್ಪ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಹಿಂದಿನ ಲೇಖನದೂರುದಾರನಿಗೆ ಅಂತಿಮ ವರದಿ ಮಾಹಿತಿ ನೀಡಲು ತನಿಖಾಧಿಕಾರಿಗೆ ಆದೇಶಿಸುವಂತೆ ಡಿಜಿಪಿಗೆ ನಿರ್ದೇಶಿಸಿದ ಹೈಕೋರ್ಟ್
ಮುಂದಿನ ಲೇಖನಮಂಗಳೂರಿನಲ್ಲಿ ಹೆಚ್ಚಿದ ನೀರಿನ ಸಮಸ್ಯೆ: ಕಟ್ಟಡ ಕಾಮಗಾರಿ, ವೆಹಿಕಲ್ ವಾಶ್ ನಿಷೇಧ