ದಾವಣೆಗೆರೆ: ಮಗಳಿಗೆ ಆಕ್ಟಿವ್ ಹೋಂಡಾ ಚಾಲನೆಗೆ ಅವಕಾಶ ಮಾಡಿಕೊಟ್ಟ ತಾಯಿಗೆ ಸಂಚಾರ ಪೊಲೀಸರು 25 ಸಾವಿರ ರೂ. ದಂಡ ವಿಧಿಸಿದ್ದಾರೆ.
ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ ಅಪ್ರಾಪ್ತ ಬಾಲಕಿಯೊಬ್ಬಳು ಆಕ್ಟಿವ್ ಹೊಂಡಾ ಚಲಾಯಿಸುತ್ತಿದ್ದಳು. ಅದನ್ನು ತಡೆದ ಟ್ರಾಫಿಕ್ ಪೊಲೀಸರು ದಾಖಲೆ ಪರಿಶೀಲನೆ ಮಾಡಿದ್ದಾರೆ. ಇದೇ ವೇಳೆ, ಅದನ್ನು ಚಲಾಯಿಸುತ್ತಿರುವುದು ಅಪ್ರಾಪ್ತ ಬಾಲಕಿ ಎಂಬುದು ದೃಢವಾಗೊದೆ. ನಂತರ ಪೊಲೀಸರು ಆಕೆಯ ತಾಯಿಗೆ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಂಚಾರ ನಿಯಮಗಳಲ್ಲಿ ಏನಿದೆ?
ಕರ್ನಾಟಕದಲ್ಲಿ, ಸಣ್ಣ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದು ಅಪರಾಧವಾಗಿದೆ. ಅಂಥ ಪೋಷಕರು ಅಥವಾ ಪಾಲಕರಿಗೆ ಕಠಿಣ ದಂಡವನ್ನು ವಿಧಿಸಲು ಅವಕಾಶವಿದೆ. ‘ಮೋಟಾರು ವಾಹನಗಳ ಕಾಯ್ದೆ, 1988’ ರ ಅಡಿಯಲ್ಲಿ, ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ, ವಾಹನದ ಮಾಲೀಕರಿಗೆ (ಸಾಮಾನ್ಯವಾಗಿ ಪೋಷಕರು) ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 25,000 ರೂ. ಮೇಲ್ಪಟ್ಟು ದಂಡ, ಅಥವಾ ಎರಡೂ ಶಿಕ್ಷೆಯನ್ನು ವಿಧಿಸಬಹುದಾಗಿದೆ. ವಾಹನದ ನೋಂದಣಿಯನ್ನು 12 ತಿಂಗಳ ಅವಧಿಗೆ ಅಮಾನತಿನಲ್ಲಿ ಇಡುವುದಕ್ಕೂ ಅವಕಾಶವಿದೆ.















