ಮನೆ ಕ್ರೀಡೆ ನೂರನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಡೇವಿಡ್ ವಾರ್ನರ್

ನೂರನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಡೇವಿಡ್ ವಾರ್ನರ್

0

ಮೆಲ್ಬೋರ್ನ್: ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ದ್ವಿಶತಕ ಸಿಡಿಸಿದ್ದಾರೆ.

ಆ ಮೂಲಕ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಡಬಲ್ ಸೆಂಚುರಿ ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್’ಮನ್ ಎನಿಸಿಕೊಂಡರು.

ಇದಕ್ಕೂ ಮುನ್ನ ಇಂಗ್ಲೆಂಡ್ ಟೆಸ್ಟ್ ತಂಡದ ಮಾಜಿ ನಾಯಕ ಜೋ ರೂಟ್ ಅವರು ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್’ಮನ್ ಎನಿಸಿಕೊಂಡಿದ್ದರು. ಇದೀಗ ಈ ಸಾಲಿಗೆ ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ಸೇರ್ಪಡೆಯಾಗಿದ್ದಾರೆ. ಪಂದ್ಯದ ಎರಡನೇ ದಿನ 254 ಎಸೆತಗಳಲ್ಲಿ ಅಜೇಯ 200 ರನ್ ಗಳಿಸಿದ ಡೇವಿಡ್ ವಾರ್ನರ್ ಚೆಂಡು ತಗುಲಿಸಿಕೊಂಡು ಡ್ರೆಸ್ಸಿಂಗ್ ಕೊಠಡಿಗೆ ಮರಳಿದರು.

ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಅವರು ಶತಕ ಸಿಡಿಸಿದ್ದರು. ಆ ಮೂಲಕ ಬಹುತೇಕ ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿ ಟೆಸ್ಟ್ ಶತಕ ಪೂರೈಸಿದ್ದರು. ಇದರ ಜೊತೆ 8000 ಟೆಸ್ಟ್ ರನ್’ಗಳನ್ನು ಎಡಗೈ ಬ್ಯಾಟ್ಸ್’ಮನ್ ಪೂರ್ಣಗೊಳಿಸಿದ್ದರು. ಆ ಮೂಲಕ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೂರನೇ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಡೇವಿಡ್ ವಾರ್ನರ್ ಬರೆದಿದ್ದಾರೆ.

ಒಟ್ಟಾರೆ 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ 10ನೇ ಬ್ಯಾಟ್ಸ್ಮನ್ ಎಂಬ ಕೀರ್ತಿಗೆ ಡೇವಿಡ್ ವಾರ್ನರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 100ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್’ನ ಕಾಲಿನ್ ಕೌಡ್ರೀ, ಜಾವೇದ್ ಮಿಯಾಂದದ್ (ಪಾಕಿಸ್ತಾನ), ಗಾರ್ಡನ್ ಗ್ರೀನಡ್ಜ್(ವೆಸ್ಟ್ ಇಂಡೀಸ್), ಅಲೆಕ್ ಸ್ಟೀವಾರ್ಟ್ (ಇಂಗ್ಲೆಂಡ್), ಇಂಜಮಾಮ್ ಉಲ್ ಹಕ್ (ಪಾಕಿಸ್ತಾನ) ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ), ಹಾಶೀಮ್ ಆಮ್ಲಾ (ದಕ್ಷಿಣ ಆಫ್ರಿಕಾ) ಹಾಗೂ ಜೋ ರೂಟ್ (ಇಂಗ್ಲೆಂಡ್) ಅವರು ಮೂರಂಕಿ ವೈಯಕ್ತಿಕ ಮೊತ್ತ ದಾಖಲಿಸಿದ್ದರು.

ಎರಡನೇ ದಿನದಾಟದ ಅಂತ್ಯಕ್ಕೆ ಸ್ಕೋರ್ ವಿವರ

ದಕ್ಷಿಣ ಆಫ್ರಿಕಾ: ಪ್ರಥಮ ಇನಿಂಗ್ಸ್ 68.4 ಓವರ್ಗಳಿಗೆ 189-10 (ಮಾರ್ಕೊ ಯೆನ್ಸನ್ 59; ಕ್ಯಾಮೆರಾನ್ ಗ್ರೀನ್ 27ಕ್ಕೆ 5, ಮಿಚೆಲ್ ಸ್ಟಾರ್ಕ್ 39ಕ್ಕೆ 2)

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್ 91 ಓವರ್’ಗಳಿಗೆ 386-3 (ಡೇವಿಡ್ ವಾರ್ನರ್ 200*, ಸ್ಟೀವನ್ ಸ್ಮಿತ್ 85, ಟ್ರಾವಿಸ್ ಹೆಡ್ 48*; ಎನ್ರಿಕ್ ನೊರ್ಕಿಯಾ 50ಕ್ಕೆ 1, ಕಗಿಸೊ ರಬಾಡ 94ಕ್ಕೆ 1)