ವಿಜಯಪುರ: ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಓರ್ವ ವ್ಯಕ್ತಿಯ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಮನಾವರ ದೊಡ್ಡಿ ಬಳಿ ನಡೆದಿದೆ.
ಸತೀಶ್ ರಾಠೋಡ್ ಮೃತ ವ್ಯಕ್ತಿ.
ರಮೇಶ್ ಚವ್ಹಾಣ್ ಹಾಗೂ ಇತರರಿಂದ ಕೃತ್ಯವೆಸಗಿರುವ ಆರೋಪ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇನ್ನು ಹತ್ಯೆ ಹಿಂದೆ ಯುವತಿಯ ನೆರಳಿದೆ ಎಂದು ಕೊಲೆಗೀಡಾದ ಸತೀಶ್ ತಂದೆ ಪ್ರೇಮಸಿಂಗ್ ಆರೋಪಿಸಿದ್ದಾರೆ. ರಮೇಶ್ ಚವ್ಹಾಣ್ ಪುತ್ರಿಯನ್ನ ಸತೀಶ್ ರಾಠೋಡ್ ಮದುವೆಯಾಗಲು ಗುರು ಹಿರಿಯರ ಸಮ್ಮುಖದಲ್ಲಿ ಕೇಳಲಾಗಿತ್ತು. ಕಳೆದ ಒಂದೂವರೆ ವರ್ಷದ ಹಿಂದೆ ರಮೇಶ್ ಮಗಳ ಜೊತೆ ಸತೀಶ್ ವಿವಾಹ ಪ್ರಸ್ತಾಪ ನಡೆದಿತ್ತು. ಆದರೆ ಸತೀಶ್ಗೆ ನನ್ನ ಮಗಳನ್ನು ಕೊಡಲ್ಲ ಎಂದು ಖಡಾಖಂಡಿತವಾಗಿ ರಮೇಶ್ ಹೇಳಿದ್ದರು. ಇದಾದ ಬಳಿಕ ಒಂದು ವರ್ಷದ ಹಿಂದೆ ರಮೇಶ್ ಮಗಳು ಬಾವಿಗೆ ಹಾರಿ ಮೃತಪಟ್ಟಿದ್ದಳಂತೆ.
ಇದೇ ಕಾರಣವೇ ಸತೀಶ್ ಮೇಲೆ ರಮೇಶ್ ಹಾಗೂ ಸಹಚರರಿಗೆ ಕೋಪವಿತ್ತಂತೆ. ಇದೇ ಕೋಪದಲ್ಲಿ ಸತೀಶ್ ನನ್ನ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆಂದು ಸತೀಶ್ ತಂದೆ ಪ್ರೇಮ್ಸಿಂಗ್ ಆರೋಪಿಸಿದ್ದಾರೆ. ಆದರೆ ಪೊಲೀಸರ ತನಿಖೆಯ ಬಳಿಕ ಸತೀಶ್ ಹತ್ಯೆಯ ಸತ್ಯಾಂಶ ಬಯಲಿಗೆ ಬರುವ ಸಾಧ್ಯತೆ ಇದೆ.
ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಇತರೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಎಷ್ಟು ಗುಂಡುಗಳನ್ನು ಹಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಸ್ಥಳದಲ್ಲಿ ಸತೀಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.