ಮನೆ ರಾಜ್ಯ ತಗ್ಗು ಪ್ರದೇಶಗಳಲ್ಲಿ ಬೇಸ್​ಮೆಂಟ್ ನಿರ್ಮಾಣಕ್ಕೆ ತಡೆ: ಹೊಸ ಕಾನೂನು ತರಲು ಡಿಸಿಎಂ ಡಿಕೆಶಿ ತೀರ್ಮಾನ

ತಗ್ಗು ಪ್ರದೇಶಗಳಲ್ಲಿ ಬೇಸ್​ಮೆಂಟ್ ನಿರ್ಮಾಣಕ್ಕೆ ತಡೆ: ಹೊಸ ಕಾನೂನು ತರಲು ಡಿಸಿಎಂ ಡಿಕೆಶಿ ತೀರ್ಮಾನ

0

ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಗಾಲದಲ್ಲಿ ಕಂಡುಬರುವ ತೀವ್ರ ಜಲಾವೃತ್ತ ಸಮಸ್ಯೆಗೊಂದು ಶಾಶ್ವತ ಪರಿಹಾರ ರೂಪಿಸಲು ಸರ್ಕಾರ ಮುಂದಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ತಗ್ಗು ಪ್ರದೇಶಗಳು ಹಾಗೂ ಕೆರೆಗಳ ಸಮೀಪದಲ್ಲಿ ಬೇಸ್​ಮೆಂಟ್ ಪಾರ್ಕಿಂಗ್ ನಿರ್ಮಾಣಕ್ಕೆ ತಡೆ ನೀಡಲು ಹೊಸ ಕಾನೂನು ತರಲು ಮುಂದಾಗಿರುವುದಾಗಿ ಘೋಷಿಸಿದ್ದಾರೆ.

ನಗರದ ಬಿಟಿಎಂ ಲೇಔಟ್​ ಮಧುವನ ಅಪಾರ್ಟ್​ಮೆಂಟ್​ನಲ್ಲಿ ತುಂಬಿದ್ದ ಮಳೆ ನೀರು ಹೊರಹಾಕುವ ವೇಳೆ ವಿದ್ಯುತ್ ಶಾಕ್​ನಿಂದ ಇಬ್ಬರು ಸಾವನ್ನಪ್ಪಿದ್ದು, ಇದೀಗ ಮೃತರ ಕುಟುಂಬಕ್ಕೆ ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಬೇಸ್​ಮೆಂಟ್​ನಿಂದ ಸಾಕಷ್ಟು ಅನಾಹುತವಾಗುತ್ತಿದೆ. ಹೀಗಾಗಿ ಬೇಸ್​ಮೆಂಟ್ ಬಗ್ಗೆ ಪ್ರತ್ಯೇಕ ಕಾನೂನು ತರುತ್ತೇವೆ. ಇನ್ಮುಂದೆ ಮನೆ ಕಟ್ಟಬೇಕಾದರೆ ಬೇಸ್​ಮೆಂಟ್ ಮಾಡಬಾರದು. ಇನ್ಮುಂದೆ ಗ್ರೌಂಡ್​ಫ್ಲೋರ್​ನಲ್ಲೇ ಪಾರ್ಕಿಂಗ್ ಇರಬೇಕು. ಬೇಸ್​ಮೆಂಟ್ ಬಗ್ಗೆ ಹೊಸ ಕಾನೂನು ತರುತ್ತೇವೆ. ಬೇಸ್​ಮೆಂಟ್​ನಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ, ಕಟ್ಟುವಂತಿಲ್ಲ ಎಂದು ಹೇಳಿದರು.

ಇದೇ ವೇಳೆ ಬಿಬಿಎಂಪಿ ಹಾಗೂ ಜಲಮಂಡಳಿಯವರಿಂದ ಸರಿಯಾದ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎನ್ನುವ ಸಾರ್ವಜನಿಕರ ದೂರಿನ ಬಗ್ಗೆ ಕೇಳಿದಾಗ, ಬೆಂಗಳೂರಿನ ಜನಸಂಖ್ಯೆ 1.40 ಕೋಟಿಯಿದೆ. ವಾರ್ ರೂಮಲ್ಲಿ ಹೇಗೆ ಕೆಲಸ ನಡೆಯುತ್ತದೆ ಎಂದು ಮಾಧ್ಯಮಗಳೇ ಒಮ್ಮೆ ಬಂದು ನೋಡಿ. ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಮಳೆ ಬಂದು ಅವಘಡ ಉಂಟಾಗಿರುವ ಭಾಗದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರು ಸಹ ಸಹಕಾರ ನೀಡುತ್ತಿದ್ದಾರೆ. ವಾರ್ ರೂಮ್ ಮೂಲಕವೂ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದು ವಿವರಿಸಿದರು.