ಬೆಂಗಳೂರು: ಕರ್ನಾಟಕದ ಜೀವನಾಡಿಯಾದ ಕಾವೇರಿ ನದಿಗೆ ಸಾಂಸ್ಕೃತಿಕವಾಗಿ ಮತ್ತಷ್ಟು ಮಹತ್ವ ನೀಡುವ ಉದ್ದೇಶದಿಂದ, ರಾಜ್ಯ ಸರ್ಕಾರ ‘ಕಾವೇರಿ ಆರತಿ’ಯ ಸಂಪ್ರದಾಯವನ್ನು ಆರಂಭಿಸಲು ಮುಂದಾಗಿದೆ. ಈ ಉದ್ದೇಶಕ್ಕಾಗಿ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಜಲಮಂಡಳಿ ಮತ್ತು ಕಾವೇರಿ ಆರತಿ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧು ಕೋಕಿಲ ಮತ್ತು ಅರ್ಜುನ್ ಜನ್ಯ ಅವರಿಗೆ ವಿಶೇಷ ಗೀತ ರಚನೆಗಾಗಿ ಪತ್ರ ಬರೆದಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಪತ್ರದಲ್ಲಿ, ಕಾವೇರಿ ಆರತಿಯನ್ನು ಗಂಗೆಯ ಗಂಗಾರತಿ ಮಾದರಿಯಲ್ಲಿ ನಡೆಸುವ ಆಲೋಚನೆ ಇದೆ ಎಂದು ತಿಳಿಸಿದ್ದಾರೆ. ಕಾವೇರಿ ನದಿಯ ಪವಿತ್ರತೆ, ಪರಂಪರೆ ಮತ್ತು ಭಕ್ತಿಯ ಸೊಗಡನ್ನು ಸಮರ್ಪಕವಾಗಿ ಪ್ರತಿಬಿಂಬಿಸುವಂತಹ ಗೀತೆಯನ್ನು ಸೃಷ್ಟಿಸುವಂತೆ ಅವರಿಗೆ ಮನವಿ ಮಾಡಿದ್ದಾರೆ. ಈ ಗೀತೆಯಲ್ಲಿ ಜಾನಪದ ಸೊಬಗು, ಧಾರ್ಮಿಕ ಭಾವನೆ, ಭಕ್ತಿ ಮತ್ತು ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿರಬೇಕು ಎಂದು ಹೇಳಿದ್ದಾರೆ.
ಪತ್ರದಲ್ಲಿ ಅವರು ಸ್ಪಷ್ಟಪಡಿಸಿದಂತೆ, ಈ ಗೀತೆಯು ಕೇವಲ ಭಕ್ತಿಗೆ ಒಳಪಡುವ ಗೀತವಲ್ಲದೆ, ನದಿಯ ವೈಭವ, ಅದರ ಇತಿಹಾಸ, ಪರಿಸರದ ಪ್ರಾಮುಖ್ಯತೆ ಮತ್ತು ಜಲ ಸಂಪತ್ತಿನ ಮಹತ್ವವನ್ನು ಸಹ ಸಾರುವಂತಿರಬೇಕು. ಗೀತೆಯು ವರ್ಣರಂಜಿತ ಧ್ವನಿಯಲ್ಲಿ ಮೂಡಿಬರಬೇಕಾಗಿದ್ದು, ಭಕ್ತಾದಿಗಳು ಕಾವೇರಿ ಆರತಿಯಲ್ಲಿ ಭಾಗವಹಿಸುವಾಗ ಭಾವನಾತ್ಮಕ ಅನುಭವವನ್ನು ಪಡೆಯುವಂತಿರಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಈ ಉದ್ದೇಶಕ್ಕಾಗಿ ಡಿಕೆಶಿಯವರು ಕರ್ನಾಟಕದ ಪ್ರಸಿದ್ಧ ಸಂಗೀತ ನಿರ್ದೇಶಕರನ್ನು ಆಯ್ಕೆಮಾಡಿದ್ದು, ಅವರ ಕಲಾತ್ಮಕ ನುಡಿಗಳು ಹಾಗೂ ಸಂಗೀತ ಶಕ್ತಿಯು ಈ ಮಹತ್ವದ ಯೋಜನೆಯನ್ನು ಯಶಸ್ವಿಯಾಗಿ ರೂಪಿಸಲು ನೆರವಾಗಲಿದೆ ಎಂದು ಅವರು ನಂಬಿದ್ದಾರೆ.
ಕಾವೇರಿ ಮಾತೆಯ ಪರಂಪರೆಯನ್ನು ಉಳಿಸುವುದರ ಜೊತೆಗೆ, ಜಲ ಶ್ರೀಮಂತಿಕೆ ಸಹಿತ ಕಾವೇರಿ ವೈಭವವನ್ನು ದೇಶ ವಿದೇಶಗಳಿಗೆ ಹಾಡು ಮತ್ತು ಸಂಗೀತದ ಮೂಲಕ ಸಾರುವ ಹಾಗೂ ಆರತಿಯ ಮಹಿಮೆಯನ್ನು ಮೇಳೈಸುವ ಅದ್ಭುತವಾದ ಸಾಹಿತ್ಯ ಮತ್ತು ಗೀತ ಸಂಯೋಜನೆ ಆಗಬೇಕಿದೆ ಎಂದು ಡಿಸಿಎಂ ಶಿವಕುಮಾರ್ ಹೇಳಿದ್ದಾರೆ.















