ಮನೆ ರಾಜಕೀಯ ಡಿಸಿಗಳು ಪ್ರತಿವಾರ ತಾಲ್ಲೂಕು ಕಚೇರಿಗೆ ಭೇಟಿ ನೀಡಿ: ಆರ್.ಅಶೋಕ್ ಸೂಚನೆ

ಡಿಸಿಗಳು ಪ್ರತಿವಾರ ತಾಲ್ಲೂಕು ಕಚೇರಿಗೆ ಭೇಟಿ ನೀಡಿ: ಆರ್.ಅಶೋಕ್ ಸೂಚನೆ

0

ಉಡುಪಿ(Udupi)ಮುಂದಿನ ವಾರದಿಂದ ಜಿಲ್ಲಾಧಿಕಾರಿಗಳು ಪ್ರತಿವಾರ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದ್ದಾರೆ.

ತಾಲ್ಲೂಕು ಆಡಳಿತ ಸೌಧ ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕು ಆಡಳಿತ ಸೌಧಕ್ಕೆ ಭೂಮಿಪೂಜೆ ನೆರವೇರಿಸುವ ಹಾಗೂ ಉದ್ಘಾಟಿಸುವ ಭಾಗ್ಯ ದೊರೆತಿದೆ. ಜನರ ಮನೆ ಬಾಗಿಲಿಗೆ ಸರ್ಕಾರವೇ ಹೋಗುತ್ತಿದ್ದು, ಜಿಲ್ಲಾಧಿಕಾರಿಗಳು ಕಚೇರಿ ಬಿಟ್ಟು ಹಳ್ಳಿಗಳಿಗೆ ಹೋಗಬೇಕು. ಸ್ಥಳದಲ್ಲಿಯೇ ಜನರ ಸಮಸ್ಯೆಗೆ ಪರಿಹಾರ ನೀಡಬೇಕು. ಡಿಸಿ ಮತ್ತು ತಾಲ್ಲೂಕು ಕಚೇರಿಗೆ ಜನ ಅಲೆದಾಡಬಾರದು ಎಂದು ತಿಳಿಸಿದ್ದಾರೆ.

ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ತಮ್ಮ ಸರಕಾರದ ನಿರ್ಧಾರದಂತೆ ಇನ್ನು ಮುಂದೆ ಪ್ರತಿ ಮಂಗಳವಾರ ಜಿಲ್ಲಾಧಿಕಾರಿಯವರು ಬೆಳಗ್ಗೆ10 ರಿಂದ ಅಪರಾಹ್ನ 2 ಗಂಟೆಯವರೆಗೆ ಜಿಲ್ಲೆಯ ಒಂದು ತಾಲೂಕು ಕಚೇರಿಯಲ್ಲಿ ಇರಲಿದ್ದು, ಅಲ್ಲಿ ಜನರ ಅಹವಾಲುಗಳನ್ನು ಕೇಳಿ ಬಗೆಹರಿಸಲಿದ್ದಾರೆ ಎಂದರು.

ಹಿಂದಿನ ಆಡಳಿತದಲ್ಲಿ ಫಲಾನುಭವಿಗಳಿಗೆ ಪಿಂಚಣಿ ತಲುಪಲು ಎಂಟು ತಿಂಗಳಿಂದ ಒಂದು ವರ್ಷ ತೆಗೆದುಕೊಳ್ಳುತ್ತಿದ್ದರು, ಆದರೆ ಈಗ ಪಿಂಚಣಿ ಕೇವಲ 72 ಗಂಟೆಗಳಲ್ಲಿ ಫಲಾನುಭವಿಗಳಿಗೆ ತಲುಪಿದೆ. ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಲಾಗಿದೆ ಎಂದು ಹೇಳಿದರು.