ಮನೆ ಅಪರಾಧ ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಪೇದೆ ಶವ ಪತ್ತೆ: ಕೊಲೆ ಶಂಕೆ

ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಪೇದೆ ಶವ ಪತ್ತೆ: ಕೊಲೆ ಶಂಕೆ

0

ವಾಡಿ: ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಪೇದೆಯೋರ್ವರ ಶವ ಸೋಮವಾರ ಬೆಳಗಿನ ಜಾವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಚಿತ್ತಾಪುರ ತಾಲೂಕಿನ ವಾಡಿ ನಗರ ಪೊಲೀಸ್ ಠಾಣೆಯ ಪೇದೆ ಕರಿಯಪ್ಪ (37) ಮೃತ ದುರ್ದೈವಿ.

ರವಿವಾರ ಯಾದಗಿರಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ನಾಲವಾರ ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸಿದ್ದ ಪೇದೆ ಕರಿಯಪ್ಪ ರಾತ್ರಿ 8 ಗಂಟೆಗೆ ಕರ್ತವ್ಯ ಮುಗಿಸಿ ಅಪರಿಚಿತ ಕಾರಿನಲ್ಲಿ ವಾಡಿ ಪೊಲೀಸ್ ಕ್ವಾಟ್ರಸ್ ನ ಅವರ ಮನೆಗೆ ತೆರಳಿದ್ದು, ಎಂದಿನಂತೆ ಊಟ ಮಾಡಿ ಮಲಗಿದ್ದರು ಎನ್ನಲಾಗಿದೆ.

ತಡರಾತ್ರಿ ಎದ್ದು ಪುನಃ ನಾಲವಾರ ಚೆಕ್ ಪೋಸ್ಟ್ ಕಡೆಗೆ ಬೈಕ್ ಸವಾರಿ ಹೋದವರು ಸೋಮವಾರ ಬೆಳಗ್ಗೆ ಲಾಡ್ಲಾಪುರ ಗ್ರಾಮ ಸಮೀಪದ ಡಿಗ್ಗಿ ತಾಂಡಾ ಪಕ್ಕದ ಕೂಡು ರಸ್ತೆ ಸಮೀಪ ಶವವಾಗಿ ಪತ್ತೆಯಾಗಿದ್ದಾರೆ.

ಘಟನಾ ಸ್ಥಳದಲ್ಲಿ ಪೇದೆ ಕರಿಯಪ್ಪ ಬಳಸಿದ ಬೈಕ್ ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡಿದಿರಬಹುದು ಅಥವಾ ಅಕ್ರಮ ಮರಳು ಸಾಗಾಣಿಕೆ ವಾಹನ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರಬಹುದು ಎಂಬ ಅನುಮಾನಗಳು ಸಾರ್ವಜನಿಕರನ್ನು ಕಾಡುತ್ತಿದೆ.

ಅಲ್ಲದೆ ಕರ್ತವ್ಯ ಮುಗಿದ ಮೇಲೂ ಪೇದೆ ರಾತ್ರಿ ಈ ಕಡೆ ಏಕೆ ಬಂದರು? ಎಂಬುದು ಪೊಲೀಸ್ ಅಧಿಕಾರಿಗಳ ಸಂಶಯಕ್ಕೂ ಕಾರಣವಾಗಿದೆ.

ಡಿವೈಎಸ್ಪಿ, ಸಿಪಿಐ, ಪಿಎಸ್’ಐ ಸುದರ್ಶನ್ ರೆಡ್ಡಿ ಭೇಟಿ ನೀಡಿದ್ದಾರೆ.