ಚೆನ್ನೈ : ತಮಿಳುನಾಡಿನ ಹೊಸೂರಿನ ಪ್ರಸಿದ್ಧ ಚಂದ್ರಚೂಡೇಶ್ವರ ದೇವಸ್ಥಾನದ ಪ್ರಸಾದದಲ್ಲಿ ಸತ್ತ ಮರಿ ಹಾವು ಪತ್ತೆಯಾದ ದುರಂತದ ಘಟನೆ ಭಕ್ತರಲ್ಲಿ ಆತಂಕವನ್ನುಂಟುಮಾಡಿದೆ. 800 ವರ್ಷಗಳ ಇತಿಹಾಸವಿರುವ ಈ ದೇವಾಲಯವು ಪ್ರತಿದಿನ ನೂರಾರು ಭಕ್ತರನ್ನು ಆಕರ್ಷಿಸುತ್ತಿದ್ದು, ಈ ಘಟನೆ ಭದ್ರತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ದೇವಾಲಯವು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 800 ರಿಂದ 1000 ಭಕ್ತರು ಇಲ್ಲಿ ದರ್ಶನ ಪಡೆಯುತ್ತಾರೆ. ಬೆಂಗಳೂರು-ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿಯ ಹತ್ತಿರವಿರುವ ಈ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತಿದ್ದ ವೇಳೆ, ಅದರಲ್ಲಿ ಸತ್ತ ಹಾವು ಕಂಡುಬಂದ ಹಿನ್ನೆಲೆಯಲ್ಲಿ ಕೋಲಾಹಲ ಉಂಟಾಯಿತು.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾದದ ಫೋಟೋಗಳು ವೈರಲ್ ಆಗಿದ್ದು, ಇದರಿಂದ ಭಕ್ತರ ಆಕ್ರೋಶ ಹೆಚ್ಚಾಗುತ್ತಿದೆ. ದೇವಾಲಯದ ಪ್ರಸಾದದಲ್ಲಿ ಹಾವು ಪತ್ತೆಯಾಗಿದ್ದರೂ ಕೂಡ ಪ್ರಾಥಮಿಕವಾಗಿ ಆಡಳಿತ ಮಂಡಳಿ ಯಾವುದೇ ಸ್ಪಂದನೆ ನೀಡದೇ ನಿರ್ಲಕ್ಷ್ಯ ತೋರುವಿಕೆ ತೋರಿದರೆಂದು ಕೆಲವು ಭಕ್ತರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರು ತಕ್ಷಣ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಅಧಿಕೃತ ದೂರು ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಸ್ತುತ ತನಿಖೆ ನಡೆಯುತ್ತಿದೆ. ದೇವಾಲಯದ ಆಡಳಿತ ಮಂಡಳಿ ಅಥವಾ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.
ಇದನ್ನು ಗಮನಿಸಿದ ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣಾ ಇಲಾಖೆ ಇದೀಗ ದೇವಾಲಯಗಳಲ್ಲಿ ನೀಡಲಾಗುವ ಪ್ರಸಾದದ ಗುಣಮಟ್ಟವನ್ನು ಪರಿಶೀಲಿಸಲು ಕ್ರಮ ಕೈಗೊಂಡಿದೆ. ಈಗಾಗಲೇ ತಮಿಳುನಾಡು ಸರ್ಕಾರ ಅನಾರೋಗ್ಯಕರ ಆಹಾರ ವಿತರಣೆಯ ವಿರುದ್ಧ ಗಂಭೀರ ಕ್ರಮಗಳನ್ನು ತೆಗೆದುಕೊಂಡಿದ್ದು, ಕೆಲ ರಸ್ತೆಬದಿ ಹೋಟೆಲ್ಗಳಿಗೆ ಬೀಗ ಹಾಕಲಾಗಿದೆ. ದೇವಾಲಯದ ಪ್ರಸಾದದಲ್ಲಿ ಹಾವು ಕಂಡುಬಂದ ನಂತರ ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.














