ಕಲಬುರಗಿ (kalaburagi): ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯ ಕಮಲಾಪುರದ ಹೊರವಲಯದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸರಕು ಸಾಗಣೆ ವಾಹನ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದೆ.
ಈ ವೇಳೆ ಬಸ್ ಗೆ ಬೆಂಕಿ ಹತ್ತಿಕೊಂಡಿದ್ದು, ಬಸ್ ನಲ್ಲಿದ್ದ ದಂಪತಿಯೊಬ್ಬರು ಮಗಳನ್ನು ರಕ್ಷಿಸಿ ತಾವು ಸಜೀವ ದಹನವಾಗಿರುವ ಘಟನೆ ನಡೆದಿದೆ.
ಜಿ.ಅರ್ಜುನ ಕುಮಾರ್ ಮತ್ತು ಸರಳಾದೇವಿ ಅರ್ಜುನ ಮೃತಪಟ್ಟವರು. ಜಿ.ಅರ್ಜುನ ಕುಮಾರ್ ಮತ್ತು ಸರಳಾದೇವಿ ಅರ್ಜುನ ಮೃತಪಟ್ಟವರು. ಪುತ್ರಿ ಪ್ರಣತಿಯನ್ನು ಬಸ್‌ನಿಂದ ಹೊರಹಾಕಿ ಅಪಾಯದಿಂದ ಪಾರು ಮಾಡಿದ ದಂಪತಿಗೆ ಪುತ್ರ ವಿವಾನ್ ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ.
ಬೆಳಿಗ್ಗೆ 6.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಬಸ್ ಸೇತುವೆಯ ಬದಿಯ ಹಳ್ಳದಲ್ಲಿ ಬಿತ್ತು. ಭಾರೀ ಶಬ್ಧ ಕೇಳಿಸುತ್ತಿದ್ದಂತೆ ಸುತ್ತಲಿನವರು ಓಡಿ ಬಂದು ಬೆಂಕಿಯ ಕೆನ್ನಾಲಿಗೆಯನ್ನೂ ಲೆಕ್ಕಿಸದೇ ಕೆಲವರು ಪ್ರಯಾಣಿಕರ ರಕ್ಷಣೆಗೆ ಮುಂದಾದರು. ಬೆಂಕಿಯ ತೀವ್ರತೆ ಹೆಚ್ಚಾದ ಕಾರಣ ಕೆಲವರು ಹಿಂದೆ ಸರಿದರು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ನಾನು ಬೆಳಿಗ್ಗೆ ನೀರು ಪೂರೈಕೆ ಘಟಕಕ್ಕೆ ಬಂದಾಗ, ಭಾರಿ ಶಬ್ದ ಕೇಳಿಸಿತು. ಸೇತುವೆ ಕೆಳಗಡೆ ಹಳ್ಳಕ್ಕೆ ಬಿದ್ದ ಬಸ್‌ಗೆ ಹೊತ್ತಿಕೊಂಡಿತ್ತು. ಹಿಂಬದಿಯಿಂದ ಪ್ರಯಾಣಿಕರು ಗಾಜು ಹೊಡೆದು ಹೊರ ಬರುತ್ತಿದ್ದರು. ಸ್ಥಳಕ್ಕೆ ಹೋಗಿ, ಇಬ್ಬರನ್ನು ಪಾರು ಮಾಡಿದೆ. ಬೆಂಕಿ ಕೆನ್ನಾಲೆ ಹೆಚ್ಚಾದಂತೆ ಒಳಗಿದ್ದವರ ಚೀರಾಟ ಜೋರಾಯಿತು. ಮತ್ತೆ ಇಬ್ಬರನ್ನು ಹೊರ ಎಳೆದೆವು. ದಂಪತಿಯೊಬ್ಬರು ಮಗಳನ್ನು ಎತ್ತಿ ಹೊರ ಕೊಟ್ಟರು. ಅವರನ್ನೂ ಹೊರ ತರುವಷ್ಟರಲ್ಲಿ ಬೆಂಕಿ ಎಲ್ಲಾ ಕಡೆ ವ್ಯಾಪಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.