ಕೋಲಾರ: ಪತ್ನಿಯನ್ನು ಕೊಂದು ಮಾವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲು ಹೋಗಿದ್ದ ಕೊಲಾರ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿಯಲ್ಲಿ ನಡೆದಿದೆ.
ಶ್ರೀನಿವಾಸಪುರದ ಮಾಂಸದ ವ್ಯಾಪಾರಿ ನಾಗೇಶ್ ಕೊಲೆ ಆರೋಪಿ, ತನ್ನ ಪತ್ನಿ ರಾಧಾ (32) ಳನ್ನು ಕೊಲೆ ಮಾಡಿ ಆಕೆಯ ತಂದೆಯ ಮುನಿಯಪ್ಪ (60) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ನಾಗೇಶ ತನ್ನ ಮೊದಲ ಪತ್ನಿ ರಾಧಾಗೆ ವಿಚ್ಛೇದನ ನೀಡಿದ್ದ, ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡುತ್ತಿದ್ದ. ಎರಡನೇ ಪತ್ನಿಯೊಂದಿಗೆ ಶ್ರೀನಿವಾಸಪುರದಲ್ಲಿ ವಾಸವಾಗಿದ್ದ. ಕೋರ್ಟ್ ನಲ್ಲಿ ಕೇಸ್ ಇನ್ನೂ ನಡೆಯುತ್ತಿತ್ತು. ಮಂಗಳವಾರ ನಂಬಿಹಳ್ಳಿಗೆ ಬಂದ ನಾಗೇಶ್, ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವಿಚ್ಛೇದಿತ ಪತ್ನಿ ರಾಧಾ ಮತ್ತು ಮಾವನ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ರಾಧಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ, ಕೃತ್ಯ ತಡೆಯಲು ಬಂದ ರಾಧಾ ಸಹೋದರಿ ಮತ್ತು ಆಕೆಯ ಪತಿ ಮೇಲೂ ಹಲ್ಲೆ ನಡೆಸಿದ್ದಾನೆ.
ಈ ಅಮಾನುಷ ಹಲ್ಲೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ನಾಗೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಜನಸಂದಣಿಯನ್ನು ಕಂಡ ನಾಗೇಶ್ ಮನೆಯೊಂದಕ್ಕೆ ನುಗ್ಗಿ ಬೀಗ ಹಾಕಿಕೊಂಡಿದ್ದಾನೆ. ಮನೆಯೊಂದರಲ್ಲಿ ಸೇರಿಕೊಂಡ ಆರೋಪಿ, ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಮತ್ತು ಬೆಂಕಿಪೊಟ್ಟಣ ಕೈಯಲ್ಲಿ ಹಿಡಿದು ಯಾರಾದರೂ ಮುಂದೆ ಬಂದರೆ ಸಿಲಿಂಡರ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು ಮನೆಯಲ್ಲಿ ಅವಿತು ಕುಳಿತಿದ್ದ ಆರೋಪಿಗೆ ಶರಣಾಗಲು ಸೂಚಿಸಿದರು. ಆದರೆ, ಆರೋಪಿ ನಾಗೇಶ್ ಪೊಲೀಸರ ಮೇಲೆ ಮಾರಕಾಶ್ತ್ರಗಳಿಂದ ದಾಳಿ ಮಾಡಲು ಯತ್ನಿಸಿದಾಗ ಎಂ.ನಾರಾಯಣ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದರು. ಕೆಳಗೆ ಬಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕೇಂದ್ರ ವಿಭಾಗದ ಐಜಿ ರವಿಕಾಂತೇಗೌಡ ತಿಳಿಸಿದ್ದಾರೆ.
ಕಿಟಕಿಯ ಮೂಲಕ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಬಾಗಿಲು ಹೊಡೆದು ನಾಗೇಶನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನಾರಾಯಣ್ ಅವರ ಗನ್‌ಮ್ಯಾನ್ ಮತ್ತು ಕೆಲವು ಪೊಲೀಸರು ಮನೆ ಪ್ರವೇಶಿಸಿದಾಗ, ನಾಗೇಶ್ ಅವರ ಮೇಲೆ ಹಲ್ಲೆ ನಡೆಸಿದ. ತಕ್ಷಣ ಪೊಲೀಸರು ನಾಗೇಶ್ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಜನರು ನಾಗೇಶ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ವೇಳೆ ಲಘು ಲಾಠಿ ಪ್ರಹಾರ ನಡೆಸಲಾಗಿದೆ, ಗಾಯಗೊಂಡ ಪೊಲೀಸ್ ಸಿಬ್ಬಂಜಿ ಸ್ಥಿತಿ ಸ್ಥಿರವಾಗಿದೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.