ಬೆಂಗಳೂರು : ಅತಿ ವೇಗದ, ನಿರ್ಲಕ್ಷ್ಯದ ಚಾಲನೆಯಿಂದ ಪಾದಚಾರಿಗಳ ಸಾವಿಗೆ ಕಾರಣನಾದ ಯುವಕನಿಗೆ ಕರ್ನಾಟಕ ಹೈಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದೆ.
ಅಪರಾಧ ನಡೆದ ಸಮಯದಲ್ಲಿ 21 ವರ್ಷ ವಯಸ್ಸಿನವರಾಗಿದ್ದ ಹನುಮಂತರಾಯಪ್ಪ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯನ್ನು ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಟಿ ವಜಾಗೊಳಿಸಿದ್ದಾರೆ.
ಸುಪ್ರೀಂ ತೀರ್ಪು ಉಲ್ಲೇಖಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು, ಐಪಿಸಿಯ ಸೆಕ್ಷನ್ 304-ಎ ಅಡಿಯಲ್ಲಿ ಅಪರಾಧಿಗೆ ಕನಿಷ್ಠ 6 ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದರು. ಪರವಾನಗಿ ಮತ್ತು ವಿಮೆಯಿಲ್ಲದೆಯೇ ವಾಹನ ಚಲಾಯಿಸುವ ವ್ಯಕ್ತಿಗಳು, ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗುತ್ತಿರುವುದನ್ನು ಕೋರ್ಟ್ ಉಲ್ಲೇಖಿಸಿತು.
ಶಿಕ್ಷೆಯನು ರದ್ದುಪಡಿಸುವಂತೆ ಆರೋಪಿ ಹನುಮಂತರಾಯಪ್ಪ ಕೋರಿದಾಗ, ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್, ಅಪಘಾತದ ಸಮಯದಲ್ಲಿ ಕುಡಿದ ಅಮಲಿನಲ್ಲಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ. ಹನುಮಂತರಾಯಪ್ಪ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದು, ನಿರ್ಲಕ್ಷ್ಯತನದಿಂದ ಪಾದಚಾರಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದಾನೆ ಎಂದು ವಾದ ಮಂಡಿಸಿತು.
ವಿಚಾರಣಾ ನ್ಯಾಯಾಲಯವು ಈ ಹಿಂದೆ ಹನುಮಂತರಾಯಪ್ಪ ಅವರನ್ನು ಐಪಿಸಿ ಸೆಕ್ಷನ್ 279 ಮತ್ತು 304-ಎ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿ, ಆರು ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 5,000 ದಂಡ ವಿಧಿಸಿತ್ತು.ಸಾಕ್ಷಿಗಳ ಹೇಳಿಕೆಯನ್ನು ಪರಿಶೀಲಿಸಿದ ಹೈಕೋರ್ಟ್, ಹನುಮಂತರಾಯಪ್ಪ ಅವರ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿರುವುದನ್ನು ಎತ್ತಿಹಿಡಿಯಿತು.