ಬೆಂಗಳೂರು (Bengaluru) ನಟಿ ಚೇತನಾ ರಾಜ್ (Chethana Raj)ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಕೊಬ್ಬನ್ನು ತೆಗೆಯುವ ಶಸ್ತ್ರಚಿಕಿತ್ಸೆ (ಲೈಪೋ ಸಕ್ಷನ್)ಯ ನಂತರ ಕನ್ನಡ ನಟಿ ಚೇತನ ರಾಜ್ ಅವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಿಂದ ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಗೆ ನೋಟಿಸ್ ಜಾರಿ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿಗಳು, ಶೆಟ್ಟಿ ಸೌಂದರ್ಯವರ್ಧಕ ಕೇಂದ್ರವು ಪಾಲಿಕ್ಲಿನಿಕ್ ಮತ್ತು ಡಿಸ್ಪೆನ್ಸರಿಯನ್ನು ನಡೆಸಲು ಮಾತ್ರ ಪರವಾನಗಿಯನ್ನು ಹೊಂದಿತ್ತು. ಅವರು ಚೇತನಾ ರಾಜ್ ಅವರಿಗೆ ನಡೆಸಲಾದ ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಕ್ಕಾಗಿ ಅಲ್ಲ. ಹೀಗಾಗಿ ಅವರು ಈ ಘಟನೆಯ ಕುರಿತು ಲಿಖಿತ ವಿವರಣೆಯನ್ನು ಸಲ್ಲಿಸಬೇಕಾಗಿದೆ. ಸ್ಪಂದಿಸದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚೇತನಾ ಅವರ ತಂದೆ ವರದರಾಜು, ವೈದ್ಯರ ನಿರ್ಲಕ್ಷ್ಯ ದಿಂದಲೇ ಮಗಳು ಚೇತನಾ ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ. ಡಾ.ಸಾಹೇಬ್ ಗೌಡ ಶೆಟ್ಟಿ, ಡಾ.ಶೆಟ್ಟಿ ಕಾಸ್ಮಿಟಿಕ್ ಸೆಂಟರ್ ಮೇಲೆ ಗಂಭೀರ ಆರೋಪ ಮಾಡಲಾಗಿದ್ದು, ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಲಿದ್ದು, ಆರೋಪ ಸಾಬೀತಾದಲ್ಲಿ ಐಪಿಎಸ್ ಸೆಕ್ಷನ್ ಅಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
ಎಫ್ಎಸ್ಎಲ್ ರಿಪೋರ್ಟ್, ಮರಣೋತ್ತರ ಪರೀಕ್ಷಾ ವರದಿ ಹಾಗೂ ವೈದ್ಯರ ಕಮಿಟಿ ನೀಡುವ ವರದಿ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಚೇತನಾರ ಪೋಷಕರು ನೀಡಿದ ದೂರಿನ ಪ್ರಕಾರ, ನಟಿ ಮೇ 16 ರಂದು ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಸ್ವಲ್ಪ ಸಮಯದ ನಂತರ ಅವರು ಉಸಿರಾಟದ ತೊಂದರೆ ಅನುಭವಿಸಿದ ಕಾರಣ ಕೂಡಲೇ ಅವರನ್ನು ಮಂಜುನಾಥ ನಗರದ ಕಾಡೆ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ದೂರಿನ ಆಧಾರದ ಮೇಲೆ ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ‘ಅಸ್ವಾಭಾವಿಕ ಮರಣ ವರದಿ’ಯ ಅಡಿಯಲ್ಲಿ (ಯುಡಿಆರ್) ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ವಿನಾಯಕ ಪಾಟೀಲ್ ಮಾಹಿತಿ ನೀಡಿದ್ದರು. ಚೇತನಾ ಸರ್ಜರಿಗೆ ಒಳಗಾದ ಬಗ್ಗೆ ಪೋಷಕರಿಗೆ ಮಾಹಿತಿ ಇರಲಿಲ್ಲ. ನಟಿ ಸ್ನೇಹಿತರೊಂದಿಗೆ ಸರ್ಜರಿಗೆ ತೆರಳಿದ್ದರು ಎಂದು ವರದಿಯಾಗಿದೆ.