ಮೈಸೂರು: ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ವೀರಪ್ಪನ್ ಸಹಚರ ಮೀಸೆ ಮಾದಯ್ಯ (72) ಸಾವನ್ನಪ್ಪಿದ್ದಾನೆ.
ಸುಮಾರು 29 ವರ್ಷದಿಂದ ಜೈಲಿನಲ್ಲಿದ್ದ ಮಾದಯ್ಯ, ಬಟ್ಟೆ ತೊಳೆಯುವಾಗ ಜಾರಿಬಿದ್ದಿದ್ದನು. ತಕ್ಷಣ ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ.
ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತನಿಗೆ ಪಾಲಾರ್ ಬಾಂಬ್ ಸ್ಪೋಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವದಿ ಶಿಕ್ಷೆಯಾಗಿತ್ತು. ವೀರಪ್ಪನ್ ಇನ್ನುಳಿದ ಸಹಚರರಾದ ಸೈಮನ್, ಬಿಲವೇಂದ್ರನ್, ಮೀಸೆ ಮಥಾಯನ್ ಜೈಲಿನಲ್ಲಿರುವಾಗಲೇ ಸಾವನ್ನಪ್ಪಿದ್ದರು. ಮಾದಯ್ಯ ಕೂಡ ಹೀಗೇ ಮೃತಪಟ್ಟಿದ್ದಾನೆ.
ಪಾಲಾರ್ ಬಾಂಬ್ ಸ್ಫೋಟ ಪ್ರಕರಣ
ಅದು 90ರ ದಶಕ ಸಮಯ ತಮಿಳುನಾಡು ಮತ್ತು ಕರ್ನಾಟಕ ಪೊಲೀಸರಿಗೆ ವೀರಪ್ಪನ್ ತಲೆನೋವಾಗಿದ್ದನು. ಈತ ಮಹದೇಶ್ವರ ಬೆಟ್ಟಕ್ಕೆ ಹೊಂದಿಕೊಂಡಿರುವ ಪಾಲಾರ್ ಗ್ರಾಮದ ಸುತ್ತಮುತ್ತ ಸುಮಾರು 50 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದನು. 1993 ರ ಏಪ್ರಿಲ್ 9 ರಂದು ತಮಿಳುನಾಡಿನ ಅಂದಿನ ಎಸ್’ಟಿಎಫ್ ಮುಖ್ಯಸ್ಥರಾಗಿದ್ದ ಗೋಪಾಲಕೃಷ್ಣ ಮತ್ತು ಅವರ ತಂಡದ ಮೇಲೆ ವೀರಪ್ಪನ್ ಸಹಚರರು ದಾಳಿ ನಡೆಸಲು ಸಂಚು ರೂಪಿಸಿದ್ದರು. ಸಾಕಷ್ಟು ಬಾಂಬ್ ಗಳನ್ನು ಸಂಗ್ರಹಿಸಿಟ್ಟಿದ್ದ ವೀರಪ್ಪನ್ ಸಹಚರರು ಪಾಲಾರ್ ಸಮೀಪದ ಸೊರೆಕಾಯಿಪಟ್ಟಿ ಬಳಿ ನೆಲಬಾಂಬ್ ಹೂತಿಟ್ಟಿದ್ದರು.
ಗೋಪಾಲ್ ಕೃಷ್ಣ ಅವರನ್ನು ಒಳಗೊಂಡ ವಿಶೇಷ ತಂಡ ಮಾಹಿತಿದಾರರ ಜೊತೆ ತಮಿಳುನಾಡು ಗಡಿ ಭಾಗದಲ್ಲಿರುವ ಪಾಲಾರ್ ನತ್ತ ಹೊರಟಿತ್ತು. ಸೈಮನ್ ಸಿಡಿಸಿದ ನೆಲಬಾಂಬ್ ನಿಂದ 22 ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದರು. ಘಟನೆ ನಂತರ ವೀರಪ್ಪನ್ ಸೇರಿದಂತೆ 124 ಮಂದಿ ಸಹಚರರ ವಿರುದ್ಧ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಲಾಗಿತ್ತು. ಅಂದಿನ ಎಸ್ ಟಿಎಫ್ ಮುಖ್ಯಸ್ಥರಾಗಿದ್ದ ಶಂಕರ ಬಿದರಿ ಅವರು ವೀರಪ್ಪನ್ ಸೆರೆಗಾಗಿ ತಮ್ಮ ತಂಡದೊಂದಿಗೆ ಮಲೈ ಮಹದೇಶ್ವರ ಬೆಟ್ಟದ ಸುತ್ತ ಕಾರ್ಯಾಚರಣೆ ತೀವ್ರಗೊಳಿಸಿ, ಮೂರು ತಿಂಗಳ ಬಳಿಕ ವೀರಪ್ಪನ್ ಸಹಚರರಾದ ಮೀಸೆಕಾರ ಮಾದಯ್ಯ, ಜ್ಞಾನ ಪ್ರಕಾಶ್, ಸೈಮನ್ ಮತ್ತು ಬಿಲವೇಂದ್ರನ್ ಅವರನ್ನು ಬಂದಿಸಿದ್ದರು.