ಮನೆ ಕಾನೂನು `ಅಪರೂಪದಲ್ಲೇ ಅಪರೂಪʼದ ಮಾನದಂಡಗಳು ಕಠಿಣವಾದ ಕಾರಣ ಮರಣದಂಡನೆ ವಿಧಿಸುವುದು ಅತ್ಯಂತ ಕಷ್ಟ: ಮಧ್ಯಪ್ರದೇಶ ಹೈಕೋರ್ಟ್

`ಅಪರೂಪದಲ್ಲೇ ಅಪರೂಪʼದ ಮಾನದಂಡಗಳು ಕಠಿಣವಾದ ಕಾರಣ ಮರಣದಂಡನೆ ವಿಧಿಸುವುದು ಅತ್ಯಂತ ಕಷ್ಟ: ಮಧ್ಯಪ್ರದೇಶ ಹೈಕೋರ್ಟ್

0

ಕ್ರೌರ್ಯದ ಅಪರಾಧಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸುವ ಮಾನದಂಡಗಳನ್ನು ಸುಪ್ರೀಂ ಕೋರ್ಟ್‌ ಅತಿ ಎತ್ತರದಲ್ಲಿ ಇರಿಸಿರುವುದರಿಂದ (ಕಠಿಣವಾಗಿಸಿರುವುದರಿಂದ) ಅಪರಾಧಿಯ ಕೃತ್ಯ ಅತ್ಯಂತ ಪೈಶಾಚಿಕವಾಗಿದ್ದರೂ ಸಹ ನ್ಯಾಯಾಲಯಗಳು ಮರಣದಂಡನೆ ವಿಧಿಸಲು ಅಸಾಧ್ಯವಾಗುತ್ತಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. 

[ಅಂಕಿತ್ ವಿಜಯವರ್ಗಿಯಾ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

“ಅಪರಾಧವೊಂದನ್ನು ಅಪರೂಪದಲ್ಲೇ ಅಪರೂಪ ಎಂದು ಪರಿಗಣಿಸಲು ಅಗತ್ಯವಾದ ಕ್ರೌರ್ಯದ ಮಾನದಂಡಗಳನ್ನು ಇತ್ತೀಚಿನ ದಿನಗಳಲ್ಲಿ ಎಷ್ಟು ಎತ್ತರಿಸಲಾಗಿದೆ ಎಂದರೆ ಅಪರಾಧಿಯ ಕೃತ್ಯವು ಎಷ್ಟೇ ಪೈಶಾಚಿಕವಾಗಿದ್ದರೂ ಆತನಿಗೆ ಮರಣದಂಡನೆ ಶಿಕ್ಷೆ ದೊರೆಯುವುದು ಅತ್ಯಂತ ಕಷ್ಟಸಾಧ್ಯ. ಸುಪ್ರೀಂ ಕೋರ್ಟ್‌ ಕೂಡ ಮೊಹಮ್ಮದ್ ಫಿರೋಜ್ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ ಇದನ್ನು ದಾಖಲಿಸಿದೆ” ಎಂದು ನ್ಯಾಯಾಲಯ ಜೂನ್‌ 15ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ಅಪರಾಧಿಗೆ ಮರಣದಂಡನೆ ವಿಧಿಸಲಾಗಿದ್ದರೂ ಸೂಕ್ತ ಸಮಯದೊಳಗೆ ಅದನ್ನು ವಿಧಿಸುವುದಿಲ್ಲ ಹೀಗಾಗಿ ಅದರ ಭೀತಿಯ ಮೌಲ್ಯ ಕಳೆದುಹೋಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸುಬೋಧ್ ಅಭ್ಯಂಕರ್ ಮತ್ತು ಸತ್ಯೇಂದ್ರ ಕುಮಾರ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಆದ್ದರಿಂದ ಮರಣದಂಡನೆ ಕುರಿತು ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸುವುದು ಸೂಕ್ತ ಎಂದು ನ್ಯಾಯಾಲಯ ಪರಿಗಣಿಸಿತು. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ 30 ವರ್ಷದ ಅಂಕಿತ್‌ ವಿಜಯ್‌ವರ್ಗೀಯ ಎಂಬ ಅಪರಾಧಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆ ರದ್ದುಗೊಳಿಸಿ 20 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ಹೊರಹಾಕಿತು.