ಹೆಚ್.ಡಿ. ಕೋಟೆ: ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನೂರಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಮತ್ತೂರು ಗ್ರಾಮದಲ್ಲಿ ನಡೆದಿದೆ. ಮಾದಪ್ಪ ಮೃತ ರೈತ, ಈತ ಯಲಮತ್ತೂರು ಗ್ರಾಮದಲ್ಲಿ ಮನೆ ಕಟ್ಟಲು ಮತ್ತು ಕೃಷಿ ಚಟುವಟಿಕೆಗಾಗಿ ಹಲವು ಮೈಕ್ರೋ ಫೈನಾನ್ಸ್‌ಗಳಿಂದ ಸುಮಾರು ೧೫ ಲಕ್ಷ ರೂ. ಸಾಲ ಸೇರಿದಂತೆ ತನ್ನ ಸಂಬಂಧಿಕರ ಬಳಿಯೂ ಕೈ ಸಾಲವನ್ನು ಮಾಡಿದ್ದನು.
ಅತಿವೃಷ್ಟಿಯಿಂದ ಬೆಳೆ ನಾಶವಾಗಿ ಸಾಲ ತೀರಿಸಲು ದಿಕ್ಕು ತೋಚದೆ ಮಾದಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷ ಸೇವನೆ ಬಳಿಕ ಈತ ನರಲಾಳುತ್ತಿದ್ದನ್ನು ಕಂಡ ಕೆಲವರು ಮಾದಪ್ಪನನ್ನು ಹೆಚ್.ಡಿ. ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಾದಪ್ಪ ಮೃತಪಟ್ಟನು ಎನ್ನಲಾಗಿದೆ. ಆಸ್ಪತ್ರೆಯ ಮುಂದೆ ಮಾದಪ್ಪನ ಕುಟುಂಬಸ್ಥರು, ಹೆಂಡತಿ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.














