ಬೆಂಗಳೂರು: ಗೃಹ ಸಚಿವ ಡಾ. ಜಿ.ಪರಮೇಶ್ವರ್ ಆಪ್ತ ಎಂದು ಹೇಳಿಕೊಂಡು ಬ್ಯಾಂಕ್ ನಿಂದ ಸಾಲ ಹಾಗೂ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಮೊಹಮ್ಮದ್ ಜುಬೇರ್(30) ಬಂಧಿತ ಆರೋಪಿ.
ಈತ ಕೆಂಗೇರಿಯ ಶಾಹಿದಾ ತಬಸುಮ್ (55) ಎಂಬುವರಿಗೆ ಸೇರಿದ 1.20 ಕೋಟಿ ರೂ. ಹಣ ಹಾಗೂ 186 ಗ್ರಾಂ. ಚಿನ್ನ ಪಡೆದು ವಂಚನೆ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು. ಈ ದೂರು ಆಧರಿಸಿ ಕಾರ್ಯಾಚರಣೆಗೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಈತನ ವಿಚಾರಣೆ ವೇಳೆ ಈತನ ವಿರುದ್ಧ ಕೆಂಗೇರಿ ಠಾಣೆ ಸೇರಿ ನಗರದ ವಿವಿಧೆಡೆ ಸುಮಾರು 10ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕೊರಟಗೆರೆ ಮೂಲದ ಆರೋಪಿಯು ಗೃಹ ಸಚಿವ ಜಿ.ಪರಮೇಶ್ವರ ಅವರ ಆಪ್ತನೆಂದು ಹೇಳಿಕೊಂಡು, ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದ. ಬ್ಯಾಂಕ್ ಸಾಲ ಹಾಗೂ ಸರ್ಕಾರಿ ಕೆಲಸ ಕೊಡಿಸುವುದಾಗಿ ಮುಂಗಡವಾಗಿ ಅವರಿಂದ ಹಣ ಪಡೆಯುತ್ತಿದ್ದ. ಅಲ್ಲದೆ, ಕೆಲವೊಂದು ದಾಖಲೆಗಳಿಗೆ ರಾಜ್ಯಪಾಲರ ಸಹಿ, ವಿವಿಧ ಇಲಾಖೆ ಅಧಿಕಾರಿಗಳ ನಕಲು ಮೊಹರು ಬಳಸಿ ವಂಚಿಸಿರುವುದು ಪತ್ತೆಯಾಗಿದೆ. ಅಲ್ಲದೆ, ಕೆಲ ಸರ್ಕಾರಿ ಅಧಿಕಾರಿಗಳಿಗೆ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದುಕೊಂಡಿದ್ದಾನೆ ಎಂಬುದು ಗೊತ್ತಾಗಿದೆ. ಇದುವರೆಗೂ ಆರೋಪಿ 1.50 ಕೋಟಿ ರೂ. ವಂಚಿಸಿದ್ದಾನೆ ಎಂದು ದೂರುದಾರರು ಆರೋಪಿಸುತ್ತಿದ್ದಾರೆ. ಆದರೆ, ಈತನಕ 80 ಲಕ್ಷ ರೂ.ಗೆ ಮಾತ್ರ ಲೆಕ್ಕ ಸಿಕ್ಕಿದೆ ಎಂದು ಪೊಲೀಸರು ಹೇಳಿದರು.