ಬೆಂಗಳೂರು: ಸಚಿವ ಸಂಪುಟ ಪುನಾರಚನೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಿ ಸಂಪುಟ ಪುನಾರಚನೆ ಮಾಡುವುದು ಪದ್ಧತಿ. ಅವರಿಬ್ಬರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ನಮಗೆ ಗೊತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಜೊತೆಗೂ ಚರ್ಚೆ ಮಾಡಬೇಕು, ಯಾವ ರೀತಿ ಮಾಡುತ್ತಾರೋ ಗೊತ್ತಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ, ಅವರು ಕೆಪಿಸಿಸಿ ಅಧ್ಯಕ್ಷರು, ಸಚಿವರಿಗೆ ಏನು ಸಂದೇಶ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಸಂಪುಟ ಪುನಾರಚನೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದರು.
ಗ್ಯಾರಂಟಿಗಳ ಬಗ್ಗೆ ಶಾಸಕ ಗವಿಯಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಶಾಸಕರು ಅವರ ಅಭಿಪ್ರಾಯ ಹೇಳ್ತಾರೆ. ಆದರೆ ಗ್ಯಾರಂಟಿಗಳ ಬಗ್ಗೆ ಪಕ್ಷ, ಸರ್ಕಾರ ತೀರ್ಮಾನ ಕೈಗೊಂಡಿದೆ. ಗ್ಯಾರಂಟಿ ಜಾರಿ ಬಗ್ಗೆ ಕದ್ದು ಮುಚ್ಚಿ ತೀರ್ಮಾನ ಮಾಡಿಲ್ಲ. ಗ್ಯಾರಂಟಿಗಳನ್ನು ನಿಲ್ಲಿಸಲ್ಲ. ಶಾಸಕರು ಅನುದಾನ ಕೇಳುವುದು ತಪ್ಪಲ್ಲ. ನನ್ನನ್ನು ಸೇರಿಸಿಕೊಂಡು ಅನುದಾನ ಕೇಳುತ್ತೇವೆ. ಸರ್ಕಾರ ಅನುದಾನ ಕೊಡುತ್ತಿದೆ. ಕಾರ್ಯಕ್ರಮಗಳು ಯಾವುದೂ ನಿಂತಿಲ್ಲ. ಹಿಂದಿನ ಸರ್ಕಾರ ಸಾಕಷ್ಟು ಬಿಲ್ ಬಾಕಿ ಉಳಿಸಿಹೋಗಿತ್ತು. ಕೇಂದ್ರವೂ ಸರಿಯಾದ ಅನುದಾನ ಕೊಡ್ತಿಲ್ಲ. ಕೇಂದ್ರದ ಅನುದಾನವೂ ತಂದು, ನಮ್ಮ ಸಂಪನ್ಮೂಲವೂ ಹೆಚ್ಚಿಸಿಕೊಳ್ಳುತ್ತೇವೆ ಎಂದರು.
ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಮಾತನಾಡಬಾರದು: ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕೆಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಸಂವಿಧಾನ ಪ್ರತೀ ಧರ್ಮ, ಸಮುದಾಯಕ್ಕೂ ಹಕ್ಕುಗಳನ್ನು ಕೊಟ್ಟಿದೆ. ಇದನ್ನು ಸ್ವಾಮೀಜಿಗಳು ಸರಿಯಾಗಿ ತಿಳಿದುಕೊಂಡಿಲ್ಲ ಅನಿಸುತ್ತದೆ. ಸಂವಿಧಾನದಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸಲಾಗಿದೆ. ಇದಕ್ಕೆ ನಾವು ವ್ಯತಿರಿಕ್ತವಾಗಿ ಮಾತನಾಡುವುದು ಸರಿಯಲ್ಲ. ಸಂವಿಧಾನದ ಆಶಯಗಳಿಗೆ ಯಾರೂ ವಿರುದ್ಧವಾಗಿ ಮಾತನಾಡಬಾರದು ಎಂದು ತಿಳಿಸಿದರು.