ಚಿತ್ರದುರ್ಗ(Chitradurga): ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ್ದಾಗಿ ದೂರುಗಳು ಸಲ್ಲಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುರುಘಾ ಮಠದ ಹಾಸ್ಟೆಲ್’ನಲ್ಲಿದ್ದ ಎಲ್ಲ ಬಾಲಕಿಯರನ್ನೂ ಆಪ್ತ ಸಮಾಲೋಚನೆಗೆ ಒಳಪಡಿಸಲು ಮಕ್ಕಳ ರಕ್ಷಣಾ ನಿರ್ದೇಶನಾಲಯ ಮುಂದಾಗಿದೆ.
ಮೂರು ಹಂತದಲ್ಲಿ ಆಪ್ತ ಸಮಾಲೋಚನೆ ನಡೆಯಲಿದ್ದು, ನ. 30ರ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದ ನಂತರ 49 ಜನ ವಿದ್ಯಾರ್ಥಿನಿಯರನ್ನು ಮಕ್ಕಳ ರಕ್ಷಣಾ ಘಟಕಗಳ ನೆರವಿನೊಂದಿಗೆ ಆಯಾ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದ್ದು, 54 ಜನ ವಿದ್ಯಾರ್ಥಿನಿಯರನ್ನು ಪಾಲಕರೊಂದಿಗೆ ಕಳುಹಿಸಿಕೊಡಲಾಗಿದೆ.
ಎಲ್ಲ ಬಾಲಕಿಯರೊಂದಿಗೆ ಸಮಾಲೋಚನೆ ನಡೆಸಿ, ದೌರ್ಜನ್ಯಕ್ಕೆ ಒಳಗಾಗಿರುವ ಸಂಗತಿ ಏನಾದರೂ ಬೆಳಕಿಗೆ ಬಂದರೆ ಕಾನೂನು ಕ್ರಮ ಜರುಗಿಸುವಂತೆ ರಾಜ್ಯದ 11 ಜಿಲ್ಲೆಗಳ ಮಕ್ಕಳ ರಕ್ಷಣಾ ಘಟಕಗಳಿಗೆ ಸೂಚಿಸಲಾಗಿದೆ.
ಮಠದ ಹಾಸ್ಟೆಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 105 ವಿದ್ಯಾರ್ಥಿನಿಯರು ಆಶ್ರಯ ಪಡೆದಿದ್ದರು. ಇಬ್ಬರು ವಿದ್ಯಾರ್ಥಿನಿಯರು ಆ. 27ರಂದು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಮಕ್ಕಳ ರಕ್ಷಣಾ ಘಟಕ 103 ವಿದ್ಯಾರ್ಥಿನಿಯರ ಹೇಳಿಕೆ ದಾಖಲಿಸಿಕೊಂಡಿತ್ತು.
54 ವಿದ್ಯಾರ್ಥಿನಿಯರು ಪೋಷಕರೊಂದಿಗೆ ಮನೆಗೆ ಮರಳಿದ್ದರು. 49 ವಿದ್ಯಾರ್ಥಿನಿಯರನ್ನು ಆಯಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿತ್ತು.
ಸ್ಥಳ ಮಹಜರು: ಬಾಲ ನ್ಯಾಯ ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖೆಯನ್ನು ಆರಂಭಿಸಿದ ಗ್ರಾಮಾಂತರ ಠಾಣೆಯ ಪೊಲೀಸರು ಬುಧವಾರ ಸ್ಥಳ ಮಹಜರು ನಡೆಸಿದ್ದಾರೆ.
ತನಿಖಾಧಿಕಾರಿಯಾಗಿರುವ ಪಿಎಸ್‌ಐ ಡಿ.ಶಿವಕುಮಾರ್ ನೇತೃತ್ವದ ಪೊಲೀಸರ ತಂಡ ಮುರುಘಾ ಮಠಕ್ಕೆ ಭೇಟಿ ನೀಡಿ, ನಾಲ್ಕೂವರೆ ವರ್ಷದ ಹೆಣ್ಣು ಮಗು ಇದ್ದ ಮಡಿಲು ದತ್ತು ಮಕ್ಕಳ ಕೇಂದ್ರ ಹಾಗೂ 17 ವರ್ಷದ ಬಾಲಕಿ ವಾಸ್ತವ್ಯ ಹೂಡಿದ್ದ ಹಾಸ್ಟೆಲ್‌ನ ಮಹಜರು ನಡೆಸಿದೆ.