ಮಂಗಳೂರು : ಮೆಕ್ಕೆಜೋಳ, ಹೆಸರುಕಾಳಿಗೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪ್ರಧಾನಿ ಮೋದಿಗೆ ಸಚಿವ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದರು.
ಇಂದು (ನ.28) ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡುವ ಹಿನ್ನೆಲೆ ಮಂಗಳೂರಿಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಸಚಿವ ದಿನೇಶ್ ಗುಂಡೂರಾವ್ ಸ್ವಾಗತಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಪರವಾಗಿ ಮೆಕ್ಕೆಜೋಳ, ಹೆಸರುಕಾಳಿಗೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದರು.
ಈ ಕುರಿತು ಸಚಿವ ದಿನೇಶ್ ಗುಂಡರಾವ್ ಪೋಸ್ಟ್ ಹಂಚಿಕೊಂಡಿದ್ದು, ರೈತರ ಬೆಳೆಗಳಿಗೆ ಬೆಂಬಲ ಬೆಲೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬೆಂಬಲ ಬೆಲೆಯಂತೆ ಬೆಳೆ ಖರೀದಿ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಚ್ಛಾಶಕ್ತಿ ತೋರಿಸಬೇಕೆಂದು ಮನವಿ ಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಮೆಕ್ಕೆಜೋಳ ಮತ್ತು ಹೆಸರು ಕಾಳು ಬೆಳೆಗಳ ತೀವ್ರ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದ ಬೆಂಬಲ ಬೆಲೆಯಲ್ಲಿ ರೈತರಬೆಳೆಗಳನ್ನು ಖರೀದಿಸುವಂತಹ ವ್ಯವಸ್ಥೆ ನಿರ್ಮಾಣ ಮಾಡಬೇಕು. ನಮ್ಮ ಲಕ್ಷಾಂತರ ರೈತರು ಜೀವನೋಪಾಯಕ್ಕಾಗಿ ಕೃಷಿ ಮಾಡಿರುವ ಬೆಳೆಗಳನ್ನು ಖರೀದಿಸುತ್ತಿರುವ ಬೆಲೆ ಕೇಂದ್ರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಬಹಳಷ್ಟು ಕಡಿಮೆ ಇದ್ದು, ಕೃಷಿಕರಲ್ಲಿ ವ್ಯಾಪಕ ಸಂಕಷ್ಟವನ್ನು ಸೃಷ್ಟಿಸಿದೆ.
ಕರ್ನಾಟಕದ ಪ್ರತಿಯೊಂದು ಕೃಷಿ ಕುಟುಂಬಕ್ಕೆ MSP ಒಂದು ಭರವಸೆಯಾಗಿ, ಘನತೆ ಮತ್ತು ನ್ಯಾಯಯುತ ಗಳಿಕೆಯ ದಾರಿಯಾಗಿದೆ. ಆದರೆ, ಪ್ರಸ್ತುತದ ಮಾರುಕಟ್ಟೆ ಪರಿಸ್ಥಿತಿಯಲ್ಲಿ, ಬೆಲೆಗಳು MSPಗಿಂತ ಕುಸಿದಿರುವಾಗ, ಕೇಂದ್ರ ಸರ್ಕಾರದ ಸಕಾಲಿಕ ಮಧ್ಯಪ್ರವೇಶದಿಂದ ರೈತರಲ್ಲಿ ವಿಶ್ವಾಸ ಮೂಡಿಸುತ್ತದೆ.
ಕರ್ನಾಟಕದ ರೈತರು ದೇಶದ ಆಹಾರ ಭದ್ರತೆ, ಎಥನಾಲ್ ಸಾಮರ್ಥ್ಯ ವಿಸ್ತರಣೆ ಮತ್ತು ಆರ್ಥಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ನ್ಯಾಯಯುತ ಸಂಗ್ರಹಣೆ ಮತ್ತು ಸಮಾನ ಎಥನಾಲ್ ಹಂಚಿಕೆಯನ್ನು ಖಚಿತಪಡಿಸುವುದು ಅವರ ಹಕ್ಕು ಮಾತ್ರವಲ್ಲ, ಅದು ರಾಷ್ಟ್ರದ ಜವಾಬ್ದಾರಿಯಾಗಿದೆ.
ಕರ್ನಾಟಕದಲ್ಲಿ ರೈತರ ತೀವ್ರ ಸಂಕಷ್ಟವನ್ನು ತಪ್ಪಿಸಲು ಮತ್ತು ನಮ್ಮ ರಾಷ್ಟ್ರದ ಕೃಷಿ ಬೆನ್ನೆಲುಬಾದವರ ಬದುಕನ್ನು ಸುಸ್ಥಿರವಾಗಿಡಲು ಮಾನ್ಯ ಪ್ರಧಾನಿಗಳು ಮನಸ್ಸು ಮಾಡಬೇಕಾಗಿ, ರೈತರ ಹಿತ ಕಾಯಬೇಕಾಗಿ ವಿನಂತಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.















