ಮನೆ ಕಾನೂನು ದೋಷಪೂರಿತ ಎಲೆಕ್ಟ್ರಿಕ್‌ ಬೈಕ್‌; ಓಲಾಗೆ 2 ಲಕ್ಷ ದಂಡ

ದೋಷಪೂರಿತ ಎಲೆಕ್ಟ್ರಿಕ್‌ ಬೈಕ್‌; ಓಲಾಗೆ 2 ಲಕ್ಷ ದಂಡ

0

ಬೆಂಗಳೂರು: ದೋಷಪೂರಿತ ಎಲೆಕ್ಟ್ರಿಕ್‌ ಬೈಕ್‌ ಮಾರಾಟ ಮಾಡಿರುವ ಓಲಾ ಎಲೆಕ್ಟ್ರಿಕ್‌ ಸಂಸ್ಥೆಗೆ, ಬೆಂಗಳೂರು 4ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯ 2 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Join Our Whatsapp Group

ಬೆಂಗಳೂರು ಆರ್‌ಟಿ ನಗರದ 22 ವರ್ಷದ ನಿವಾಸಿ ದುಗೇಶ್‌ ಎನ್‌. ಅವರು ಪ್ರತಿಷ್ಠಿತ ಬೈಕ್‌ ಸಂಸ್ಥೆಯ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರವನ್ನು ಪಡೆದುಕೊಂಡಿದ್ದಾರೆ. ದುಗೇಶ್‌ ಅವರು 2023ರ ಡಿ.14ರಂದು 1.69 ಲಕ್ಷ ರೂ. ಪಾವತಿಸಿ ಓಲಾ ಸಂಸ್ಥೆಯಿಂದ ಎಲೆಕ್ಟ್ರಿಕಲ್‌ ಬೈಕ್‌ ಖರೀದಿಸಿದ್ದರು. 2024ರ ಜ. 22ರಂದು ಬೈಕ್‌ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿ ಹೋಮ್‌ ಡೆಲಿವರಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವಾಹನದ ಪ್ಯಾನಲ್‌ ಹಾಳಾಗಿತ್ತು. ಜತೆಗೆ ವಾಹನ ಹಾರ್ನ್ ಸೌಂಡ್‌, ಪ್ಯಾನಲ್‌ ಬೋರ್ಡ್‌ ಕೆಲಸ ಮಾಡದಿರುವ ಬಗ್ಗೆ ದೂರು ನೀಡಲಾಗಿತ್ತು.

ದೂರುದಾರು ನಿರಂತರವಾಗಿ ದೂರು ನೀಡಿ ದರೂ, ಸಮಸ್ಯೆ ಪರಿಹಾರ ನೀಡುವಲ್ಲಿ ಸಂಸ್ಥೆ ವಿಫ‌ಲ ವಾಗಿತ್ತು. ಬಳಿಕ ಸಂಸ್ಥೆಯ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ದುರಸ್ತಿ ಮಾಡುವುದಾಗಿ ಹೇಳಿ ಬೈಕ್‌ ತೆಗೆದುಕೊಂಡು ಹೋಗಿದ್ದರು. ಸಂಸ್ಥೆಯು 4 ತಿಂಗಳು ನಿಗದಿತ ಅವಧಿಯೊಳಗೆ ಬೈಕ್‌ ಹಿಂದಿರುಗಿಸಲು ವಿಫ‌ಲವಾಗಿದೆ. ಗ್ರಾಹಕ ಸೇವೆಯಲ್ಲಿ ವ್ಯತ್ಯಯ ಮಾಡಿರುವುದರ ಜತೆಗೆ ದೋಷಪೂರಿತ ವಾಹನ ನೀಡಿರುವುದಕ್ಕೆ ಬೇಸರಗೊಂಡ ದುಗೇಶ್‌ ನ್ಯಾಯಕ್ಕಾಗಿ ಗ್ರಾಹಕ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.

ವಾದವೇನು?:  ದೂರುದಾರ ದುಗೇಶ್‌ ಅವರು 2024ರ ಮಾರ್ಚ್‌ನಲ್ಲಿ ಕಂಪನಿಗೆ ಲೀಗಲ್‌ ನೋಟಿಸ್‌ ನೀಡಿದ್ದಾರೆ. ಆದರೆ ಈ ಬಗ್ಗೆ ಓಲಾ ಎಲೆಕ್ಟ್ರಿಕ್‌ ಸಂಸ್ಥೆಯು ಪ್ರತಿಕ್ರಿಯೆ ನೀಡಿರಲಿಲ್ಲ. ತದನಂತರ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಆರೋಪ ಸಾಬೀತು ಮಾಡಲು ಅಗತ್ಯವಿರುವ ಸಾಕ್ಷ್ಯಗಳನ್ನು, ದೃಢಿಕರಣಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆಯೂ ಕಂಪನಿಯು ತನ್ನ ಕಡೆಯಿಂದ ಯಾವುದೇ ವಾದ ಹಾಗೂ ಪೂರಕವಾದ ದಾಖಲೆ ನೀಡಿಲ್ಲ. ಸಾಕ್ಷ್ಯವನ್ನು ಪರಿಶೀಲನೆ ಮಾಡಿದ ನ್ಯಾಯಾಲಯ ಸಂಸ್ಥೆಯ ಗ್ರಾಹಕ ಸೇವೆಯಲ್ಲಿನ ವ್ಯತ್ಯಯ ಹಾಗೂ ದೋಷ ಪೂರಿತ ಬೈಕ್‌ ನೀಡಿರುವ ಆರೋಪ ದೃಢವಾಗಿದೆ.

ಪರಿಹಾರ: ಓಲಾ ಎಲೆಕ್ಟ್ರಿಕಲ್‌ ಮೋಟಾರ್‌ ಸಂಸ್ಥೆಯು ಗ್ರಾಹಕ ಬೈಕ್‌ ಖರೀದಿಗೆ ನೀಡಿದ 1,62,450 ರೂ. ಮೊತ್ತಕ್ಕೆ ದೂರುದಾಖಲಾದ ದಿನದಿಂದ ಶೇ.6ರ ಬಡ್ಡಿ ದರದಲ್ಲಿ ಮೂಲ ಮೊತ್ತ ಪಾವತಿಸಬೇಕು. ಜತೆಗೆ ವಾಹನ ಸರಿಯಾದ ಸಮಯಕ್ಕೆ ಸಿಗದೇ ಮಾನಸಿಕ ಹಿಂಸೆಗೆ ಕಾರಣವಾದ ಹಿನ್ನೆಲೆಯಲ್ಲಿ 20 ಸಾವಿರ ರೂ. ಪರಿಹಾರ, ಕೋರ್ಟ್‌ ಬಾಬ್ತು 10 ಸಾವಿರ ಸೇರಿದಂತೆ ಒಟ್ಟು 2 ಲಕ್ಷ ರೂ. ಮೊತ್ತವನ್ನು 2024ರ ಆ.20ರೊಳಗೆ ಪಾವತಿಸಲು ಬೆಂಗಳೂರು 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.