ಮನೆ ರಾಷ್ಟ್ರೀಯ ಹಿತರಕ್ಷಣೆ ಬಿಲ್ ಮಂಡನೆ: ಅಳಿಯ, ಸೊಸೆಗೂ ಹಿರಿಯರ ಹೊಣೆ- ಕಡೆಗಣಿಸಿದರೆ 6 ತಿಂಗಳ ಜೈಲು

ಹಿತರಕ್ಷಣೆ ಬಿಲ್ ಮಂಡನೆ: ಅಳಿಯ, ಸೊಸೆಗೂ ಹಿರಿಯರ ಹೊಣೆ- ಕಡೆಗಣಿಸಿದರೆ 6 ತಿಂಗಳ ಜೈಲು

0

ಹಿರಿಯ ಜೀವಗಳ ಗೌರವದ ಬದುಕಿಗೆ ನೆರವಾಗುವ ಆಶಯದೊಂದಿಗೆ ಕೇಂದ್ರ ಸರ್ಕಾರ ಪೋಷಕರು ಮತ್ತು ಹಿರಿಯ ನಾಗರಿಕರ ಹಿತರಕ್ಷಣಾ ತಿದ್ದುಪಡಿ ವಿಧೇಯಕ-2019ವನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಿದ್ದು, ಹಿರಿಯರನ್ನು ಕಡೆಗಣಿಸುವ ಮಕ್ಕಳ ವಿರುದ್ಧ ಕಠಿಣ ನಿಯಮಗಳನ್ನು ರೂಪಿಸಲಾಗಿದೆ.

ಹಿರಿಯರ ಆರೈಕೆಗೆ ಉದಾಸೀನ ತೋರುವ, ಕಾನೂನು ಮೀರಿ ಹೆತ್ತವರನ್ನು ದೂರ ತಳ್ಳುವ ಮಕ್ಕಳಿಗೆ ಆರು ತಿಂಗಳು ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ಇಲ್ಲವೇ ಎರಡನ್ನೂ ವಿಧಿಸುವ ಕಠಿಣ ನಿಯಮ ವಿಧೇಯಕದಲ್ಲಿದೆ.

ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರು ವಿಧೇಯಕ ಮಂಡಸಿ, ಪೋಷಕರು ಮತ್ತು ಹಿರಿಯ ನಾಗರಿಕರ ಮೂಲಭೂತ ಅಗತ್ಯತೆಗಳು, ಸುರಕ್ಷತೆ, ಭದ್ರತೆ, ಆಶ್ರಯ ಹಾಗೂ ಸಂಸ್ಥೆಗಳ ನಿರ್ವಹಣೆ ಮತ್ತು ನಿಯಂತ್ರಣ ಕುರಿತು ಸಂವಿಧಾನದಡಿ ಖಾತರಿಪಡಿಸಿದ ಹಕ್ಕುಗಳನ್ನು ಇದು ಒದಗಿಸುತ್ತದೆ ಎಂದು ಹೇಳಿದರು.

ತಿದ್ದುಪಡಿ ವಿಧೇಯಕದಲ್ಲಿ ಹಿರಿಯರ ಆರೈಕೆ ಕೇಂದ್ರಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ಸ್ಥಾಪನೆಗೆ ನಿರ್ದಿಷ್ಟ ಮಾನದಂಡಗಳನ್ನು ವಿಧಿಸಲಾಗಿದೆ. ದುರ್ವರ್ತನೆ ಎಂಬ ಪದದ ವ್ಯಾಖ್ಯಾನವನ್ನು ದೈಹಿಕ ಹಲ್ಲೆ, ದೈಹಿಕ ಮತ್ತು ಮಾನಸಿಕ ಶೋಷಣೆ, ಬೈಗುಳದ ನಿಂದನೆಮ ನಿರ್ಲಕ್ಷ್ಯ, ಆರ್ಥಿಕ ಶೋಷಣೆ ಎಂಬರ್ಥದಲ್ಲಿ ವಿಸ್ತರಿಸಲಾಗಿದೆ.

ಇನ್ನು ಮಕ್ಕಳು ಎಂಬ ಪದವನ್ನು ತಂದೆ-ತಾಯಿಗೆ ಜೈವಿಕವಾಗಿ ಜನಿಸಿದವರಷ್ಟೇ ಅಲ್ಲದೇ ದತ್ತು ತೆಗೆದುಕೊಂಡವರನ್ನೂ ಒಳಗೊಂಡಂತೆ ವ್ಯಾಖ್ಯಾನಿಸಲಾಗಿದೆ. ಅಳಿಯ ಸೊಸೆ, ಮೊಮ್ಮಗ, ಮೊಮ್ಮಗಳು ಸಹ ಕಾನೂನುನಾತ್ಮಕವಾಗಿ ಹಿರಿಯರ ಪೋಷಣೆಯ ಜವಬ್ದಾರರಾಗಿರುತ್ತಾರೆ ಎಂದು ತಿಳಿಸಲಾಗಿದೆ.

ಸಂಸತ್ತಿನ ಸ್ಥಾಯಿ ಸಮಿತಿಗೆ:

ವೈಯಕ್ತಿಕ ಮಾಹಿತಿ ರಕ್ಷಣಾ ವಿಧೇಯಕವನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಸಂಸತ್ತಿನ ಜಂಟಿ ಸ್ಥಾಯಿ ಸಮಿತಿಗೆ ಒಪ್ಪಿಸಿದ್ದು, ಸಮಿತಿಯು ಒಂದಷ್ಟು ತಿದ್ದುಪಡಿಗಳ ಶಿಫಾರಸ್ಸಿನೊಂದಿಗೆ ಬಜೆಟ್ ಅಧಿವೇಶನದ ಅಂತ್ಯದೊಳಗೆ ವರದಿ ಸಲ್ಲಿಸಲಿದೆ.

ಮಂಡನೆ:

ಉದ್ಯೋಗಿಗಳ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ 9 ಕಾನೂನುಗಳನ್ನು ವಿಲೀನಗೊಳಿಸಿ ಕಾರ್ಮಿಕ ಸಂಹಿತೆ ವಿಧೇಯಕವನ್ನು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಲೋಕಸಭೆಯಲ್ಲಿ ಇದೇ ವೇಳೆ ಮಂಡಿಸಿದರು.

ತಿದ್ದುಪಡಿ ಕುರಿತ ಇನ್ನಷ್ಟು ಮಾಹಿತಿ

  • ವೃದ್ಧರು ತಮ್ಮ ಬಗ್ಗೆ ನಿರ್ಲಕ್ಷ್ಯ ತೋರುವ ಮಗ, ಮಗಳು, ಸೊಸೆ ಹಾಗೂ ಅಳಿಯಂದಿರ ವಿರುದ್ಧ ದೂರು ಕೊಡಬಹುದು.
  • ಹಿರಿಯ ನಾಗರಿಕರ ನಿರ್ವಹಣೆ ಮತ್ತು ನೆರವಿಗೆ ಪ್ರಾಧಿಕಾರ ರಚಿಸಲು ಅವಕಾಶ.
  • 80 ವರ್ಷಕ್ಕಿಂತ ಮೇಲ್ಪಟ್ಟವರ ದೂರುಗಳನ್ನು ಪ್ರಾಧಿಕಾರ 60 ದಿನದಲ್ಲಿ ಇತ್ಯರ್ಥಪಡಿಸಬೇಕು. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಹೆಚ್ಚುವರಿ 30 ದಿನ ಕಾಲಾವಕಾಶಕ್ಕೆ ಅವಕಾಶ.
  • ಮಾಸಿಕ ಗರಿಷ್ಠ 10 ಸಾವಿರ ರೂ. ನಿರ್ವಹಣಾ ವೆಚ್ಚಮಿತಿ ತೆರವುಗೊಳಿಸಿ ದುಡಿಮೆ ಆಧರಿಸಿ ನಿಗದಿಪಡಿಸಲು ಅವಕಾಶ.
  • ಹಿರಿಯ ನಾಗರಿಕರ ಪ್ರಕರಣಗಳಿಗೆ ಪ್ರತಿ ಪೊಲೀಸ್ ಠಾಣೆಯಲ್ಲಿ ನೋಡಲ್ ಅಧಿಕಾರಿಯ ನೇಮಕ, ಜಿಲ್ಲಾ ಮಟ್ಟದಲ್ಲಿ ವಿಶೇಷ ಪೊಲೀಸ್ ಘಟಕ.
  • ಗರಿಷ್ಠ 10 ಸಾವಿರ ರೂ. ದಂಡ, 6 ತಿಂಗಳ ಜೈಲು ಇಲ್ಲವೇ ಎರಡನ್ನೂ ವಿಧಿಸಲು ಅವಕಾಶ.