ಮನೆ ರಾಜ್ಯ ಪ್ರಶ್ನೆ ಪತ್ರಿಕೆ ವಿತರಣೆ ವಿಳಂಬ: ಅಗ್ನಿಶಾಮಕ ಸಿಬ್ಬಂದಿಯಿಂದ ನಕಲು ಮಾಡಲು ಪ್ರೋತ್ಸಾಹ

ಪ್ರಶ್ನೆ ಪತ್ರಿಕೆ ವಿತರಣೆ ವಿಳಂಬ: ಅಗ್ನಿಶಾಮಕ ಸಿಬ್ಬಂದಿಯಿಂದ ನಕಲು ಮಾಡಲು ಪ್ರೋತ್ಸಾಹ

0

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ ತಾಲೂಕು ವ್ಯಾಪ್ತಿಯ 19 ಪರೀಕ್ಷಾ ಕೇಂದ್ರಗಳ ಪೈಕಿ ಕೆಲವು ಕೇಂದ್ರಗಳಿಗೆ ಸೋಮವಾರ ನಡೆದ ಪ್ರಥಮ ಭಾಷೆ ವಿಷಯದ ಪ್ರಶ್ನೆ ಪತ್ರಿಕೆ ವಿತರಣೆ ಅರ್ಧ ಗಂಟೆ ವಿಳಂಬಗೊಂಡಿದ್ದು, ಎಲ್ಲೆಲ್ಲಿ ವಿಳಂಬವಾಗಿದೆಯೋ ಅಲ್ಲೆಲ್ಲ ವಿದ್ಯಾರ್ಥಿಗಳಿಗೆ  ಹೆಚ್ಚುವರಿ ಸಮಯ ನೀಡಲಾಗಿದೆ.

ಮುದ್ದೇಬಿಹಾಳದ ತಾಲೂಕು ಆಡಳಿತ ಸೌಧದಲ್ಲಿರುವ ಉಪ ಖಜಾನೆಯ ಭದ್ರತಾ ಕೊಠಡಿ ಬೀಗ ತೆರೆಯುವುದು ವಿಳಂಬಗೊಂಡಿದ್ದರಿಂದ ಈ ಸಮಸ್ಯೆ ಉಂಟಾಗಿತ್ತು.

ಮುದ್ದೇಬಿಹಾಳದ ವಿಬಿಸಿ ಪ್ರೌಢಶಾಲೆಯ ಪಕ್ಕದಲ್ಲಿ ಅಗ್ನಿಶಾಮಕ ಠಾಣೆ ಇದೆ. ಈ ಠಾಣೆಯ ಒಂದಿಬ್ಬರು ಸಿಬ್ಬಂದಿ ನಕಲು ಮಾಡಲು ಹೊರಗಿನಿಂದ ಪ್ರೋತ್ಸಾಹ ನೀಡುತ್ತಿದ್ದಾಗ ಮಾಧ್ಯಮದವರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಈ ಬಗ್ಗೆ ಕೇಳಿದರೆ ನಮ್ಮ ಸಂಬಂಧಿಕರು, ನನ್ನ ಪತ್ನಿ ಎಂದು ಸಮರ್ಥನೆ ಮಾಡಿಕೊಳ್ಳಲು ಮುಂದಾದರು. ಠಾಣೆ ಎದುರು ಇರುವ ಮರದ ಕೆಳಗೆ ಓರ್ವ ಫಿಲ್ಟರ್ ಪಕ್ಕ ಕುಳಿತು ಕೇಂದ್ರದಿಂದ ಹೊರಬಂದ ಪ್ರಶ್ನೆಗಳಿಗೆ ಉತ್ತರ ಹುಡುಕುವ, ಬರೆದು ಕೊಡುವ ಕೆಲಸವನ್ನು ಇವರು ಮಾಡುತ್ತಿದ್ದರು. ವಿಬಿಸಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಇರುವುದು ಇವರಿಗೆ ಅನುಕೂಲಕರವಾಗಿ ಪರಿಣಮಿಸಿತ್ತು.