ಮನೆ ಕಾನೂನು ಮುಡಾ ಕೇಸ್​ ನಲ್ಲಿ ಸರ್ಚ್ ವಾರಂಟ್ ನೀಡಲು ವಿಳಂಬ: ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು...

ಮುಡಾ ಕೇಸ್​ ನಲ್ಲಿ ಸರ್ಚ್ ವಾರಂಟ್ ನೀಡಲು ವಿಳಂಬ: ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಗಂಗರಾಜು

0

ಮೈಸೂರು, ಅಕ್ಟೋಬರ್ 15: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಕೇಸ್​ ಸಂಬಂಧ ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಆರ್​ ಟಿಐ ಕಾರ್ಯಕರ್ತ ಗಂಗರಾಜು ಇ-ಮೇಲ್ ಮೂಲಕ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ಮುಡಾ ಕೇಸ್​ನಲ್ಲಿ ಸರ್ಚ್ ವಾರಂಟ್ ನೀಡಲು ವಿಳಂಬ ಮಾಡಲಾಗುತ್ತಿದೆ. ಜೊತೆಗೆ ಸರ್ಚ್ ವಾರಂಟ್ ನೀಡಿ ವಾಪಸ್​ ಪಡೆಯಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಲೋಕಾಯುಕ್ತ ಹಿರಿಯ ಅಧಿಕಾರಿಗಳು, ಸಚಿವ ಭೈರತಿ ಸುರೇಶ್, ವಿಶೇಷ ಕರ್ತವ್ಯಧಿಕಾರಿ ಮಾರುತಿ ಬಗಲಿ, ಹಿಂದಿನ ಮುಡಾ ಆಯುಕ್ತರಾದ ನಟೇಶ್, ದಿನೇಶ್ ವಿರುದ್ಧ ರಾಜ್ಯಪಾಲರಿಗೆ ಇ-ಮೇಲ್ ಹಾಗೂ ಅಂಚೆ ಪತ್ರದ ಮೂಲಕ ದೂರು ಸಲ್ಲಿಕೆ ಮಾಡಲಾಗಿದೆ.

ಮುಡಾ ಹಗರಣ ಕುರಿತು ಲೋಕಾಯುಕ್ತ ದಾಖಲೆ ಸಂಗ್ರಹ ಮಾಡಿತ್ತು. ತನಿಖಾಧಿಕಾರಿಗಳು 1 ಸಾವಿರ ಪುಟಗಳ ದಾಖಲೆ ಸಂಗ್ರಹ ಮಾಡಿದ್ದರು. ಲೋಕಾಯುಕ್ತ ಇನ್ಸ್​ಪೆಕ್ಟರ್ ರವಿಕುಮಾರ್ ತಂಡ ಸಾಕ್ಷಿ ಸಂಗ್ರಹಿಸಿತ್ತು. ಬಳಿಕ ಸರ್ಚ್ ವಾರಂಟ್ ನೀಡಲು ಅಂದಿನ ಎಸ್​ಪಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿ ಸರ್ಚ್ ವಾರಂಟ್ ನೀಡಿದ್ದರು. ಕೆಲವು ಅಧಿಕಾರಿಗಳಿಂದ ಸರ್ಕಾರಕ್ಕೆ ಈ ಮಾಹಿತಿ ಸೋರಿಕೆಯಾಗಿತ್ತು. ಈ ಮೂಲಕ ಭೈರತಿ ಕಡತಗಳನ್ನು ಬೆಂಗಳೂರಿಗೆ ತರಿಸಿಕೊಂಡಿದ್ದಾರೆ. ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಗಂಗರಾಜು ಉಲ್ಲೇಖಿಸಿದ್ದಾರೆ.

ಇದರೊಂದಿಗೆ, ಇದೀಗ ಮುಡಾ ಹಗರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ಮತ್ತೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ. ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಮುಡಾ ಹಗರಣದ ತನಿಖೆ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಅದರೊಂದಿಗೆ ಇದೀಗ ರಾಜ್ಯಪಾಲರಿಗೆ ಮತ್ತೆ ದೂರು ಸಲ್ಲಿಕೆಯಾಗಿರುವುದು ಕುತೂಹಲ ಮೂಡಿಸಿದೆ.