ಮನೆ ಕಾನೂನು ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡದಂತೆ ಎಎಪಿ ನಾಯಕರಿಗೆ ದೆಹಲಿ ಹೈಕೋರ್ಟ್ ನಿರ್ಬಂಧ

ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡದಂತೆ ಎಎಪಿ ನಾಯಕರಿಗೆ ದೆಹಲಿ ಹೈಕೋರ್ಟ್ ನಿರ್ಬಂಧ

0

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡದಂತೆ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತದರ ನಾಯಕರಿಗೆ ತಡೆ ನೀಡಿ ದೆಹಲಿ ಹೈಕೋರ್ಟ್ ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದೆ.

ಅಲ್ಲದೆ ಎಎಪಿ ನಾಯಕರಾದ ಸಂಜಯ್ ಸಿಂಗ್, ಅತಿಶಿ ಹಾಗೂ ಸೌರಭ್ ಭಾರದ್ವಾಜ್ ಅವರು ಪೋಸ್ಟ್ ಮಾಡಿದ ಕೆಲವು ಅವಹೇಳನಕಾರಿ ಟ್ವೀಟ್ಗಳನ್ನು ತೆಗೆದುಹಾಕುವಂತೆ ನ್ಯಾ. ಅಮಿತ್ ಬನ್ಸಾಲ್ ನಿರ್ದೇಶಿಸಿದ್ದಾರೆ.

ಎಎಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ, ದೆಹಲಿ ಲೆಫ್ಟೆನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ತಮ್ಮ ವಿರುದ್ಧ ಭ್ರಷ್ಟಾಚಾರ  ಆರೋಪ ಮಾಡದಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದರು.

ಸಕ್ಸೇನಾ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಮಹೇಶ್ ಜೇಠ್ಮಲಾನಿ ಮತ್ತು ಮಣಿಂದರ್ ಸಿಂಗ್ ಅವರು ಎಎಪಿ ಹಾಗೂ ಅದರ ನಾಯಕರು ಮಾಡಿರುವ ಆರೋಪಗಳು ಸುಳ್ಳು ಮತ್ತು ಮಾನನಷ್ಟ ಉಂಟು ಮಾಡುವಂತಿವೆ ಎಂದು ವಾದಿಸಿದರು.

ತಾವು ಮಾಡಿದ ಆರೋಪ ಸಾಬೀತುಪಡಿಸುವಂತಹ ಅಂಶಗಳನ್ನು ಒದಗಿಸಲು ಆರೋಪಿಗಳಿಗೆ ಸಾಧ್ಯವಾಗಿಲ್ಲ. ಆರೋಪಗಳನ್ನು ಸಾಬೀತುಪಡಿಸಲು ಅವರು ಬಳಸಿರುವ ದಾಖಲೆಗಳು ಅಸ್ತಿತ್ವದಲ್ಲಿಲ್ಲ, ಅವು ನಕಲಿ ಎಂದು ಅವರು ವಿವರಿಸಿದರು.

ಸಾರ್ವಜನಿಕವಾಗಿ ಕಾಣಿಸಿಕೊಂಡು ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲದ ಉನ್ನತ ಸಾಂವಿಧಾನಿಕ ಹುದ್ದೆ (ಲೆಫ್ಟಿನೆಂಟ್ ಗವರ್ನರ್) ವಿರುದ್ಧ ಈ ಆರೋಪಗಳನ್ನು ಮಾಡಲಾಗಿದ್ದು ಎಎಪಿ ನಾಯಕರ ವಿರುದ್ಧ ತಡೆಯಾಜ್ಞೆ ಜಾರಿಗೊಳಿಸಬೇಕು. ಅಲ್ಲದೆ ಲೆಫ್ಟಿನೆಂಟ್ ಗವರ್ನರ್ ವಿರುದ್ಧದ ಎಲ್ಲಾ ಟ್ವೀಟ್, ಪೋಸ್ಟ್ ಅಥವಾ ವೀಡಿಯೊಗಳನ್ನುತೆಗೆದುಹಾಕಲು ಅವರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

ಎಎಪಿ ನಾಯಕರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಸಂದೀಪ್ ಸೇಥಿ ಮತ್ತು ರಾಜೀವ್ ನಾಯರ್, ಆರೋಪದಲ್ಲಿ ಹುರುಳಿದೆಯೋ ಇಲ್ಲವೋ ಎಂಬುದು ವಿಚಾರಣೆಯ ಹಂತದಲ್ಲಿ ತಿಳಿದು ಬರುವುರಿಂದ ಈ ಹಂತದಲ್ಲಿ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಬಾರದು ಎಂದು ಕೋರಿದರು.

ಸಾರ್ವಜನಿಕ ಸೇವಕರು ಟೀಕೆಗಳಿಗೆ ಮುಕ್ತವಾಗಿದ್ದು ದಪ್ಪ ಚರ್ಮದವರಾಗಿರಬೇಕು ಎಂಬುದು ನ್ಯಾಯಾಲಯಗಳು ವಿಧಿಸಿದ ಸಿದ್ಧಾಂತವಾಗಿದೆ. ಲೆಫ್ಟಿನೆಂಟ್ ಗವರ್ನರ್ ಕಾನೂನಿಗಿಂತಲೂ ಮಿಗಿಲಲ್ಲ. ಲೆಫ್ಟಿನೆಂಟ್ ಗವರ್ನರ್ ಹುದ್ದೆಯಲ್ಲಿದ್ದಾಗ ಮಾಡಿದ ಯಾವುದೋ ತಪ್ಪಿಗಾಗಿ ಅವರ ವಿರುದ್ಧ ತನಿಖೆ ನಡೆಸುವಂತೆ ಕೋರುತ್ತಿಲ್ಲ ಬದಲಿಗೆ ಅವರು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ)  ಮುಖ್ಯಸ್ಥರಾಗಿದ್ದಾಗಿನ ಅವರ ನಡೆಯನ್ನು ಪ್ರಶ್ನಿಸಲಾಗಿದೆ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಪರ ವಾದ ಮಂಡಿಸಿದ ಮತ್ತೊಬ್ಬ ವಕೀಲರು ಹೇಳಿದರು.

ಕೆವಿಐಸಿ ಮುಖ್ಯಸ್ಥರಾಗಿದ್ದಾಗ ಸಕ್ಸೇನಾ ₹ 1,400 ಕೋಟಿಯಷ್ಟು ಹಣದ ಅವ್ಯವಹಾರ ನಡೆಸಿದ್ದಾರೆ. ಅವರು ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡು ಮುಂಬೈ ಖಾದಿ ಲಾಂಜ್ ಒಳಾಂಗಣ ವಿನ್ಯಾಸದ ಗುತ್ತಿಗೆಯನ್ನು ತಮ್ಮ ಮಗಳಿಗೆ ನೀಡಿದ್ದಾರೆ ಎಂದು ಎಎಪಿ ನಾಯಕರು ಆರೋಪಿಸಿದ್ದರು. ಪ್ರಕರಣವನ್ನು ಸಿಬಿಐ ಮತ್ತು ಇ ಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು.

ಆದರೆ ಇದಕ್ಕೆ ಆಕ್ಷೇಪಿಸಿದ್ದ ಸಕ್ಸೇನಾ ಎಎಪಿ ನಾಯಕರಿಗೆ ಲೀಗಲ್ ನೋಟಿಸ್ ನೀಡಿದ್ದರು.  ನೋಟಿಸ್ಗೆ ಎಎಪಿ ನಾಯಕರು ಉತ್ತರಿಸದೇ ಇದ್ದುದರಿಂದ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.