ನವದೆಹಲಿ: ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಇಂದು ರೂಸ್ ಅವೆನ್ಯೂ ನ್ಯಾಯಾಲಯವು ಆಗಸ್ಟ್ 20ರವರೆಗೆ ವಿಸ್ತರಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಅರವಿಂದ್ ಕೇಜ್ರಿವಾಲ್ ಅವರನ್ನು ಜೂನ್ 26ರಂದು ತಿಹಾರ್ ಜೈಲಿನಿಂದ ಸಿಬಿಐ ಬಂಧಿಸಿದ್ದು, ಇಡಿ ದಾಖಲಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರಂಭದಲ್ಲಿ ಮಾರ್ಚ್ 21ರಂದು ಇಡಿಯಿಂದ ಬಂಧಿಸಲ್ಪಟ್ಟ ಕೇಜ್ರಿವಾಲ್ ಅವರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಜೂನ್ 20ರಂದು ಜಾಮೀನು ನೀಡಿತ್ತು. ಆದರೆ ಹೈಕೋರ್ಟ್ ಆ ಆದೇಶಕ್ಕೆ ತಡೆ ನೀಡಿತು. ಜುಲೈ 12ರಂದು ಇಡಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತು. ಆದರೆ, ಅವರು ಆ ಪ್ರಕರಣದಲ್ಲಿ ಜಾಮೀನು ಬಾಂಡ್ ಅನ್ನು ಒದಗಿಸದ ಕಾರಣ ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಇದಕ್ಕೂ ಮುನ್ನ ಆಗಸ್ಟ್ 5ರಂದು ದೆಹಲಿ ಹೈಕೋರ್ಟ್ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಕೇಜ್ರಿವಾಲ್ ಮತ್ತು ಸಿಬಿಐ ಪರ ವಕೀಲರ ವಾದವನ್ನು ಆಲಿಸಿದ ನಂತರ ನ್ಯಾಯಾಲಯವು ಜುಲೈ 29ರಂದು ಎಎಪಿ ನಾಯಕನ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ರದ್ದುಗೊಂಡಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಅವರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 17ರಂದು ಹೈಕೋರ್ಟ್ ಕಾಯ್ದಿರಿಸಿತ್ತು.
ಸಿಬಿಐ ಮತ್ತು ಇಡಿ ಪ್ರಕಾರ, ಅಬಕಾರಿ ನೀತಿಯನ್ನು ಮಾರ್ಪಡಿಸುವಾಗ ಅಕ್ರಮಗಳು ನಡೆದಿವೆ ಮತ್ತು ಪರವಾನಗಿ ಹೊಂದಿರುವವರಿಗೆ ಅನಪೇಕ್ಷಿತ ಅನುಕೂಲಗಳನ್ನು ವಿಸ್ತರಿಸಲಾಗಿದೆ ಎಂಬ ಆರೋಪವನ್ನು ಅರವಿಂದ್ ಕೇಜ್ರಿವಾಲ್ ಎದುರಿಸುತ್ತಿದ್ದಾರೆ.