ಹಾಸನ: ಐಪೋನ್ ಮೊಬೈಲ್ ಬಾಕ್ಸ್ ತೆರೆದಿದ್ದ ಕೊರಿಯರ್ ಹಿಂಪಡೆಯಲು ನಿರಾಕರಿಸಿದ ಡೆಲಿವರಿ ಬಾಯ್ ನನ್ನು ಚಾಕುವಿನಿಂದ ಇರಿದು ಕೊಂದು ಶವವನ್ನು ಗೋಣಿಚೀಲದಲ್ಲಿ ತೆಗೆದುಕೊಂಡು ಹೋಗಿ ಅರಸೀಕೆರೆ ಅಂಚೆಕೊಪ್ಪಲು ಬ್ರಿಡ್ಜ್ ಪಕ್ಕ ಪೆಟ್ರೋಲ್ ಸುರಿದು ಸುಟ್ಟಿ ಹಾಕಿದ್ದ ಪ್ರಕರಣಕ್ಕೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೇಮಂತ್ ದತ್ತ (20) ಬಂಧಿತ ಆರೋಪಿ. ಅರಸೀಕೆರೆ ಲಕ್ಷ್ಮೀಪುರಂ ಬಡಾವಣೆ ವಾಸಿಯಾದ ಈತ ಹೇಮಂತ್ ನಾಯ್ಕ್ (23) ಎಂಬ ಕೊರಿಯರ್ ಬಾಯ್ ಮೃತ ದುರ್ದೈವಿ.
ಅರಸೀಕೆರೆ ರೈಲ್ವೆ ಪೊಲೀಸರು ಪ್ರಕರಣವನ್ನು ಅರಸೀಕೆರೆ ನಗರ ಠಾಣೆ ಪೊಲೀಸರಿಗೆ ವರ್ಗಾಯಿಸಿದ್ದರು.
ಏನಿದು ಪ್ರಕರಣ?
‘‘ಮೃತ ಹೇಮಂತ್ ನಾಯ್ಕ್ ಇ-ಕಾರ್ಟ್ ಎಕ್ಸ್’ಪ್ರೆಸ್’ನಲ್ಲಿ ಡೆಲಿವರಿಬಾಯ್ ಆಗಿದ್ದು, ಫೆ.7 ರಂದು ಬೆಳಗ್ಗೆ 7.30ಕ್ಕೆ ಕೆಲಸಕ್ಕೆ ಹೋದವನು ಮನೆಗೆ ಮರಳಿಲ್ಲ ಎಂದು ಈತನ ಅಣ್ಣ ಮಂಜನಾಯ್ಕ ಫೆ.8 ರಂದು ದೂರು ನೀಡಿದ್ದರು. ಹೇಮಂತ್ ದತ್ತನಿಗೆ ಫ್ಲಿಪ್’ಕಾರ್ಟ್ ಮೂಲಕ ಬಂದಿದ್ದ ಐಪೋನ್ ಕೊಡಲು ಹೋಗಿದ್ದ ವೇಳೆ ಓಪನ್ ಮಾಡಿ ತೋರಿಸಲಾಗಿತ್ತು. ಈ ವೇಳೆ ಬಾಕ್ಸ್ ತೆರೆಯುವಂತಿಲ್ಲ ನೀನು ತೆರೆದಿದ್ದೀಯ. ವಾಪಸ್ ತೆಗೆದುಕೊಂಡು ಹೋಗು ಎಂದು ಹೇಮಂತ್ ದತ್ತ ತಿಳಿಸಿದ.
ಹಿಂತಿರುಗಿಸಲು ಆಗಲ್ಲ. 46 ಸಾವಿರ ರೂಪಾಯಿ ಕೊಡಬೇಕೆಂದು ಹೇಳಿದಾಗ ಇಬ್ಬರ ನಡುವೆ ಗಲಾಟೆಯಾಗಿತ್ತು. ಆ ವೇಳೆ ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಆರೋಪಿ ತಂದೆ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದು, ತಾಯಿ ಮಗಳ ಮನೆಯಲ್ಲಿ ಇದ್ದ ಕಾರಣ ಆರೋಪಿ ಒಬ್ಬನೇ ಮನೆಯಲ್ಲಿದ್ದ ಎಂದು ಡಿವೈಎಸ್’ಪಿ ಲೋಕೇಶ್ ತಿಳಿಸಿದರು.
ಫೆ.7 ರಂದು ಹೇಮಂತ್ ನಾಯ್ಕ್ ನನ್ನು ಕೊಲೆ ಮಾಡಿದ ಹೇಮಂತ್ ದತ್ತ ತನ್ನ ಮನೆಯ ಶೌಚಾಲಯದಲ್ಲಿ ಚೀಲದಲ್ಲಿ ಮೂರುದಿನ ಶವ ಇರಿಸಿದ್ದ. ಕೊಳೆತ ವಾಸನೆ ಪ್ರಾರಂಭಗೊಂಡಿದ್ದರಿಂದ ಫೆ.11 ರಂದು ಮುಂಜಾನೆ ತನ್ನ ಡಿಯೋ ಸ್ಕೂಟರ್’ನಲ್ಲಿ ಶವಕೊಂಡೊಯ್ದು ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಪೊಲೀಸರು ಆರೋಪಿ ಹೇಮಂತ ದತ್ತನನ್ನು ಫೆ.17 ರಂದು ಬಂಧಿಸಿ ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಿಐ ಗಂಗಾಧರ್, ಪಿಎಸ್’ಐ ಭಾರತಿ ರಾಯನಗೌಡ ಮತ್ತು ಸಿಬ್ಬಂದಿಗಳು ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್’ಪಿ ಶ್ಲಾಘಿಸಿದರು.