ನವದೆಹಲಿ : ಒಳಮೀಸಲಾತಿ ಅವೈಜ್ಞಾನಿಕ ವರ್ಗೀಕರಣ ಆರೋಪದ ಹಿನ್ನಲೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಅಲೆಮಾರಿ ಸಮುದಾಯ ಸಿಡಿದೆದ್ದಿದೆ. ಶೇ.1ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿಭಟನಾಕಾರರು, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಬಳಿಕ ಅಕ್ಬರ್ ರಸ್ತೆಯಲ್ಲಿರುವ ಹಳೆಯ ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಯತ್ನವನ್ನೂ ನಡೆಸಿದರು. ಈ ವೇಳೆ ಉದ್ರಿಕ್ತ ಪ್ರತಿಭಟನಾಕಾರರನ್ನು ಬ್ಯಾರಿಕೇಡ್ ಹಾಕಿ ದೆಹಲಿ ಪೊಲೀಸರು ತಡೆದರು. ಬಳಿಕ ನಿಯೋಗವೊಂದು ಕಾಂಗ್ರೆಸ್ ನಾಯಕ ಅಭಿಷೇಕ್ ದತ್ ಅವರನ್ನು ಭೇಟಿಯಾಗಿ ಮನವಿ ಪತ್ರವನ್ನು ನೀಡಿದರು.
ನ್ಯಾ. ನಾಗಮೋಹನ್ ದಾಸ್ ತಮ್ಮ ವರದಿಯಲ್ಲಿ ಪರಿಶಿಷ್ಟ ಸಮುದಾಯವನ್ನ ಐದು ವಿಭಾಗಗಳಾಗಿ ಪರಿಗಣಿಸಿ ಮೀಸಲಾತಿ ಹಂಚಿಕೆ ಮಾಡಿದ್ದರು. ಆದರೆ ಸರ್ಕಾರ ಅದನ್ನ ಕೇವಲ ಮೂರು ವರ್ಗಕ್ಕೆ ಮಾತ್ರ ಸೀಮಿತಗೊಳಿಸಿದೆ. ಅಲೆಮಾರಿ ಸಮುದಾಯಕ್ಕೆ ನೀಡಲಾಗಿದ್ದ ಶೇ.1ರಷ್ಟು ಮೀಸಲಾತಿಯನ್ನ ತೆಗೆಯಲಾಗಿದ್ದು, ವರ್ಗ ‘ಸಿ’ಗೆ ವಿಲೀನಗೊಳಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯದ ಬಗ್ಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮಾತನಾಡುತ್ತಾರೆ. ಆದರೆ ಬಲ್ಯಾಡ ಸಮುದಾಯಗಳ ಒತ್ತಡಕ್ಕೆ ಮಣಿದು ಅವರೇ ಅಲೆಮಾರಿಗಳಿಗೆ ಅನ್ಯಾಯ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಅನ್ವಯ, ನಾಗಮೋಹನ್ ದಾಸ್ ವರದಿ ಜಾರಿ ಮಾಡಿ ಶೇ.1ರಷ್ಟು ಮೀಸಲು ಕೊಡಬೇಕು ಎಂದು ಅಲೆಮಾರಿ ಸಮುದಾಯದ ನಾಯಕ ಮೂರ್ತಿ ಹೇಳಿದರು.
ಅಲೆಮಾರಿಗಳಿಗೆ ಅನ್ಯಾಯ ಮಾಡಿ ಸಿಎಂ ಸಿದ್ದರಾಮಯ್ಯ ಅವರು ಹಬ್ಬ ಆಚರಿಸುತ್ತಿದ್ದಾರೆ. ಸಂವಿಧಾನದ ಪುಸ್ತಕ ಹಿಡಿದು ಹೋರಾಟ ಮಾಡುವ ರಾಹುಲ್ ಗಾಂಧಿ ಎಲ್ಲಿದ್ದಾರೆ? ನಮಗೆ ನ್ಯಾಯ ಸಿಗದಿದ್ದರೇ ಮುಂದಿನ ದಿನಗಳ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಅಲೆಮಾರಿಗಳ ಸಮುದಾಯದ ನಾಯಕ ಲೋಹಿತ್ ಹೇಳಿದರು.














