ಮನೆ ಅಪರಾಧ ಜಮೀನು ಸರ್ವೆ ಮಾಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಮೂವರು ಆರೋಪಿಗಳು

ಜಮೀನು ಸರ್ವೆ ಮಾಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಮೂವರು ಆರೋಪಿಗಳು

0

ಚಿಕ್ಕಬಳ್ಳಾಪುರ(Chikkaballapura): ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧನಿಗೆ ಭೂಮಿ ಮಂಜೂರು ಮಾಡಲು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು ಹಾಗೂ ಓರ್ವ ರೈತ ಸಂಘದ ಮುಖಂಡ  ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಚಿಂತಾಮಣಿ ನಗರದ ಭೂ ದಾಖಲೆ ಉಪನಿರ್ದೇಶಕರ ಕಚೇರಿಯ ಸರ್ವೇಯರ್ ನಾಗರಾಜ್, ಡಿ ಗ್ರೂಪ್ ನೌಕರ ಪ್ರಕಾಶ್, ರೈತ ಸಂಘದ ಮುಖಂಡ ಕದಿರೇಗೌಡ ಲೋಕಾಯುಕ್ತ ಬಲೆಗೆ ಬಿದ್ದಿರುವ ಆರೋಪಿಗಳು.

ತಾಲೂಕಿನ ಅಂಬಾಜಿದುರ್ಗ ಹೋಬಳಿ, ಉಪ್ಪರಪೇಟೆ ಗ್ರಾಮ ಪಂಚಾಯಿತಿಯ ರಾಯಪ್ಪಲ್ಲಿ ಗ್ರಾಮದ ಮಾಜಿ ಯೋಧ ಶಿವಾನಂದರೆಡ್ಡಿ, ಕಳೆದ 20 ವರ್ಷದಿಂದ ತಮಗೆ ಬರಬೇಕಾಗಿದ್ದ ಭೂಮಿ ಮಂಜೂರಾತಿಗಾಗಿ ಹೋರಾಟ ನಡೆಸುತ್ತಿದ್ದರು.

ತಾಲೂಕು ಅಧಿಕಾರಿಗಳು ಮಾತ್ರ ಹಣಕ್ಕಾಗಿ ಇಲ್ಲಸಲ್ಲದ ನೆಪಗಳನ್ನು ಹೇಳುತ್ತಿದ್ದರು. ಈ ವಿಷಯವಾಗಿ ಮಾಜಿ ಯೋಧ ಶಿವಾನಂದರೆಡ್ಡಿ ಅನೇಕ ಬಾರಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್, ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದರು. ಕಳೆದ ಮೂರು ತಿಂಗಳ ಹಿಂದೆ ನಗರದಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ ಸಹ ನಡೆಸಿದ್ದರು.

ಸದ್ಯ ಮಾಜಿ ಯೋಧನ‌ ಮನವಿಗೆ ಭೂ ಮಂಜೂರಾತಿಗೆ ಸರ್ವೆ ಮಾಡಲು ಆದೇಶವಾಗಿತ್ತು. ಇದೇ ವಿಚಾರವಾಗಿ ಸರ್ವೇಯರ್, ಡಿ ಗ್ರೂಪ್ ನೌಕರ ಹಾಗೂ ರೈತ ಸಂಘದ ಮುಖಂಡ ಸೇರಿಕೊಂಡು 5 ಲಕ್ಷ ರೂಗೆ ಬೇಡಿಕೆ ಇಟ್ಟಿದ್ದರು. ಇದರಿಂದ ರೋಸಿಹೋದ ಯೋಧ ಶಿವಾನಂದರೆಡ್ಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಬುಧವಾರ ಆರೋಪಿಗಳು ಒಂದು ಲಕ್ಷ ರೂ ಪಡೆಯುತ್ತಿರುವಾಗ ಲೋಕಾಯುಕ್ತ ಎಸ್.ಪಿ ಪವನ್ ನಜ್ಜುರ್, ಡಿವೈಎಸ್ಪಿ ಭೂತೇಗೌಡ, ಇನ್ಸ್ ಸ್ಪೆಕ್ಟರ್ ಸಲೀಂ ನಡಾಫ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಿಂದಿನ ಲೇಖನಆಗುಂಬೆ ಘಾಟಿಯಲ್ಲಿ ಲಾರಿ ಟೈರ್ ಸ್ಫೋಟ: ವಾಹನ ಸಂಚಾರ ಸ್ಥಗಿತ
ಮುಂದಿನ ಲೇಖನಮತಾಂತರಗೊಳ್ಳುವ ದಲಿತರಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಕೋರಿ ಮನವಿ: ಬಾಲಕೃಷ್ಣನ್ ಆಯೋಗದ ವರದಿಯತ್ತ ಸುಪ್ರೀಂ ಚಿತ್ತ