ಉಡುಪಿ: ಖಾಸಗಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಬೇಡಿಕೆಗೆ ಸಹಮತವಿದೆ ಎಂದು ರಾಜ್ಯ ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು, ಚುನಾವಣಾ ಸಂದರ್ಭದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ನೀಡಿತ್ತು. ಅದರಂತೆ ಉಡುಪಿ ಮಂಗಳೂರು, ಶಿವಮೊಗ್ಗ ಸೇರಿದಂತೆ ಈ ಜಿಲ್ಲೆಗಳಲ್ಲಿ ಖಾಸಗಿ ಬಸ್’ನ್ನೆ ಹೆಚ್ಚಾಗಿ ಅವಲಂಭಿಸಿದ್ದಾರೆ. ಆದರೆ ಇದೀಗ ಮಾಜಿ ಸಚಿವ ಸುನೀಲ್ ಕುಮಾರ್ ಟ್ವೀಟ್ ಮೂಲಕ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುವವರಿಗೂ ಉಚಿತ ಪ್ರಯಾಣ ನೀಡಬೇಕೆಂದು ಆಗ್ರಹಿಸಿದ್ದರು.
ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ನಮ್ಮ ಸಹಮತ ಇದೆ. ಕರಾವಳಿ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಇದೆ. ಸರ್ಕಾರದ ವಾಗ್ದಾನದ ಪ್ರಕಾರ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಘೋಷಣೆಯಾಗಿದೆ. ಸರಕಾರಿ ಬಸ್ಸುಗಳಿಗೆ ಕೊಡುವ ಅನುಕೂಲ ಖಾಸಗಿ ಬಸ್ಸುಗಳಿಗೂ ನೀಡಿ. ಹಣದ ರೂಪದಲ್ಲಿ ಅಲ್ಲವಾದರೂ ತೆರಿಗೆ ವಿನಾಯಿತಿ, ಡೀಸೆಲ್ ಸಬ್ಸಿಡಿ ರೂಪದಲ್ಲಿ ಕೊಡಿ. ನಮಗೆ ಆಗುವ ಹೊರೆಯನ್ನು ತುಂಬಿಸಿಕೊಟ್ಟರೆ ಉಚಿತ ಪ್ರಯಾಣಕ್ಕೆ ನಾವು ಸಿದ್ದ ಎಂದಿದ್ದಾರೆ.
ಇಲ್ಲವಾದರೆ ಖಾಸಗಿ ಬಸ್ಸುಗಳು ಓಡಾಡುವ ಜಿಲ್ಲೆಗಳ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗುತ್ತಾರೆ. ಸರಕಾರ ನಮಗೆ ಹಣದ ರೂಪದಲ್ಲಿ ನೀಡುವುದು ಬೇಡ, ಕೆಎಸ್ ಆರ್ ಟಿಸಿ ಗೆ ಅನುಸರಿಸುವ ಮಾನದಂಡ ನಮಗೂ ಅನುಸರಿಸಿ, ಉಚಿತವಾಗಿ ವ್ಯವಸ್ಥೆ ಕಲ್ಪಿಸಲು ನಾವು ತಯಾರಿದ್ದೇವೆ. 10 ಜಿಲ್ಲೆಗಳಲ್ಲಿ ಅತಿ ಹೆಚ್ಚು ಖಾಸಗಿ ಬಸ್ ಇವೆ. 7 ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳು ಭಾಗಶಃ ಇವೆ. ಮಂಗಳೂರು, ಉಡುಪಿ, ಶಿವಮೊಗ್ಗ, ತುಮಕೂರು ಭಾಗದಲ್ಲಿ ಹೆಚ್ಚು ಖಾಸಗಿ ಬಸ್ಸುಗಳಿವೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು, ನೀವು ಹೇಳಿರುವ ಉಚಿತ ಪ್ರಯಾಣ ಸಮಗ್ರ ಜಾರಿಯಾಗಬೇಕು ಎಂದರು.